- Kannada News Photo gallery Cricket photos U19 World Cup 2024 musheer khan equals shikhar dhawan 20 years old record
U19 World Cup 2024: ಶಿಖರ್ ಧವನ್ ದಾಖಲೆ ಮೇಲೆ ಕಣ್ಣಿಟ್ಟ ಮುಶೀರ್ ಖಾನ್..!
U19 World Cup 2024: ಅಂಡರ್-19 ವಿಶ್ವಕಪ್ ಆವೃತ್ತಿಯಲ್ಲಿ ಶಿಖರ್ ಧವನ್ ನಂತರ ಎರಡು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಮುಶೀರ್ ಖಾನ್ ಭಾಜನರಾಗಿದ್ದಾರೆ. ಈ ಹಿಂದೆ 2004ರಲ್ಲಿ ಶಿಖರ್ ಧವನ್ ಈ ಸಾಧನೆ ಮಾಡಿದ್ದರು.
Updated on: Jan 30, 2024 | 9:15 PM

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್‌ನ ಸೂಪರ್ ಸಿಕ್ಸ್ ಸುತ್ತಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿರುವ ಭಾರತ ಯುವ ಪಡೆಯ ಪರ ಆಲ್ರೌಂಡರ್ ಮುಶೀರ್ ಖಾನ್ 131 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಈ ಮೂಲಕ ಮುಶೀರ್, ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಕ್ಲಬ್ಗೆ ಸೇರ್ಪಡೆಗೊಂಡಿದ್ದಾರೆ.

ಅಂಡರ್-19 ವಿಶ್ವಕಪ್ ಆವೃತ್ತಿಯಲ್ಲಿ ಶಿಖರ್ ಧವನ್ ನಂತರ ಎರಡು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೆ ಮುಶೀರ್ ಖಾನ್ ಭಾಜನರಾಗಿದ್ದಾರೆ. ಈ ಹಿಂದೆ 2004ರಲ್ಲಿ ಶಿಖರ್ ಧವನ್ ಈ ಸಾಧನೆ ಮಾಡಿದ್ದರು.

2004 ರ ಅಂಡರ್-19 ವಿಶ್ವಕಪ್‌ನಲ್ಲಿ, ಧವನ್ ಸ್ಕಾಟ್ಲೆಂಡ್ ವಿರುದ್ಧ 155, ಬಾಂಗ್ಲಾದೇಶ ವಿರುದ್ಧ 120 ಮತ್ತು ಶ್ರೀಲಂಕಾ ವಿರುದ್ಧ 146 ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇದೀಗ ಮುಶೀರ್ ಖಾನ್ ಕೂಡ 20 ವರ್ಷಗಳ ನಂತರ ಅಂಡರ್-19 ವಿಶ್ವಕಪ್‌ನಲ್ಲಿ ಎರಡು ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ 131 ರನ್‌ಗಳ ಇನ್ನಿಂಗ್ಸ್ ಆಡಿರುವ ಮುಶೀರ್ ಖಾನ್, ಲೀಗ್ ಹಂತದಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲೂ 118 ರನ್‌ಗಳ ಇನಿಂಗ್ಸ್ ಆಡಿದ್ದರು. ಇದು ಈ ಟೂರ್ನಿಯಲ್ಲಿ ಮುಶೀರ್ ಅವರ ಸತತ ಎರಡನೇ ಶತಕ ಇದಾಗಿದೆ.

ಮುಶೀರ್ ಖಾನ್ ಪ್ರಸಕ್ತ ಅಂಡರ್-19 ವಿಶ್ವಕಪ್‌ನಲ್ಲಿ ಆಡಿರುವ 4 ಇನ್ನಿಂಗ್ಸ್‌ಗಳಲ್ಲಿ 325 ರನ್ ಗಳಿಸುವ ಮೂಲಕ ಅಗ್ರ ಸ್ಕೋರರ್ ಎನಿಸಿಕೊಂಡಿದ್ದಾರೆ. ಅವರು ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಎರಡು ಶತಕ ಮತ್ತು ಒಂದು ಅರ್ಧ ಶತಕ ಕೂಡ ಸಿಡಿಸಿದ್ದಾರೆ. ಬೌಲಿಂಗ್ನಲ್ಲೂ ಮಿಂಚಿರುವ ಮುಶೀರ್ ಎರಡು ಇನ್ನಿಂಗ್ಸ್‌ಗಳಲ್ಲಿ ಇದುವರೆಗೆ 3 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದೀಗ ಟೀಮ್ ಇಂಡಿಯಾ, ನ್ಯೂಜಿಲೆಂಡ್ ಹೊರತುಪಡಿಸಿ ಸೂಪರ್ 6ನಲ್ಲಿ ಇನ್ನೊಂದು ಪಂದ್ಯವನ್ನು ಆಡಬೇಕಾಗಿದೆ. ಇದಲ್ಲದೆ ತಂಡ ಸೆಮಿಫೈನಲ್ ಅಥವಾ ಫೈನಲ್‌ಗೆ ಹೋದರೆ, ನಂತರ ಎರಡು ಪಂದ್ಯಗಳನ್ನು ಆಡಬೇಕಾಗಿದೆ. ಮುಶೀರ್ ಇದೇ ಲಯದಲ್ಲಿ ಮುಂದುವರಿದರೆ ಇನ್ನೂ ಒಂದು ಶತಕ ಬಾರಿಸುವ ಮೂಲಕ ಧವನ್ ದಾಖಲೆ ಸರಿಗಟ್ಟಬಹುದು. ಇನ್ನು ಎರಡು ಶತಕ ಬಾರಿಸಿದರೆ ಧವನ್ ದಾಖಲೆಯೂ ಮುರಿಯಲಿದೆ.

ವಾಸ್ತವವಾಗಿ ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚುತ್ತಿರುವ ಮುಶೀರ್ ಖಾನ್, ಸರ್ಫರಾಜ್ ಖಾನ್ ಅವರ ಸಹೋದರ. ಸರ್ಫರಾಜ್ ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡಿದ್ದು, ಸುದೀರ್ಘ ಕಾಯುವಿಕೆಯ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಸರ್ಫರಾಜ್ ಖಾನ್ ತಂಡಕ್ಕೆ ಎಂಟ್ರಿ ಪಡೆದಿದ್ದಾರೆ.
























