- Kannada News Photo gallery Cricket photos Varun Chakravarthy becomes second-oldest Indian to make ODI debut
ಭಾರತದ ಪರ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಯಾರು ಗೊತ್ತೇ?
Varun Chakravarthy: 33 ವರ್ಷದ ವರುಣ್ ಚಕ್ರವರ್ತಿ ಏಕದಿನ ಕ್ರಿಕೆಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ವರುಣ್ 10 ಓವರ್ಗಳಲ್ಲಿ 54 ರನ್ ನೀಡಿ 1 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಚೊಚ್ಚಲ ಒನ್ಡೇ ಮ್ಯಾಚ್ ಆಡಿದ ಎರಡನೇ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
Updated on: Feb 10, 2025 | 12:53 PM

ಕಟಕ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದ ಮೂಲಕ ವರುಣ್ ಚಕ್ರವರ್ತಿ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಅದು ಕೂಡ ತಮ್ಮ 33ನೇ ವಯಸ್ಸಿನಲ್ಲಿ. ಇದರೊಂದಿಗೆ ಭಾರತದ ಪರ ಚೊಚ್ಚಲ ಏಕದಿನ ಪಂದ್ಯವಾಡಿದ 2ನೇ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

2021 ರಲ್ಲಿ ವರುಣ್ ಚಕ್ರವರ್ತಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ಈವರೆಗೆ 18 ಟಿ20 ಮ್ಯಾಚ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗ್ಯೂ ಮಿಸ್ಟರಿ ಸ್ಪಿನ್ನರ್ಗೆ ಭಾರತ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 14 ವಿಕೆಟ್ ಕಬಳಿಸುವ ಮೂಲಕ ವರುಣ್ ಭಾರತ ಏಕದಿನ ತಂಡದ ಬಾಗಿಲು ಬಡಿದಿದ್ದಾರೆ.

ಈ ಮೂಲಕ ಭಾರತ ಏಕದಿನ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ವರುಣ್ ಚಕ್ರವರ್ತಿ ಕಟಕ್ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. 33 ವರ್ಷ, 164 ದಿನಗಳ ವಯಸ್ಸಿನಲ್ಲಿ ಚೊಚ್ಚಲ ಏಕದಿನ ಪಂದ್ಯವಾಡುವ ಮೂಲಕ ವರುಣ್ ಟೀಮ್ ಇಂಡಿಯಾ ಪಾದಾರ್ಪಣೆ ಮಾಡಿದ 2ನೇ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರನೆಂದರೆ ಫಾರೂಖ್ ಇಂಜಿನಿಯರ್. 1974 ರಲ್ಲಿ ಲೀಡ್ಸ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ 36 ವರ್ಷದ ಫಾರೂಖ್ ಇಂಜಿನಿಯರ್ ಏಕದಿನ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಈ ಮೂಲಕ ಭಾರತದ ಪರ ಏಕದಿಕ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರನ ದಾಖಲೆ ನೆದರ್ಲೆಂಡ್ನ ನೋಲನ್ ಎವಾಟ್ ಕ್ಲಾರ್ಕ್ ಹೆಸರಿನಲ್ಲಿದೆ. 1996 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಚೊಚ್ಚಲ ಪಂದ್ಯವಾಡುವ ಮೂಲಕ ನೋಲನ್ ಕ್ಲಾರ್ಕ್ ಈ ದಾಖಲೆ ಬರೆದಿದ್ದಾರೆ. ಅದು ಕೂಡ 47ನೇ ಹಿರಿ ವಯಸ್ಸಿನಲ್ಲಿ ಎಂಬುದು ವಿಶೇಷ.



















