
ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ (Virat Kohli) ಹೆಸರಿಗೆ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಅದು ಕೂಡ ಟಿ20 ರನ್ ಸರದಾರರ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರುವ ಮೂಲಕ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಲಿಸ್ಟ್ನಲ್ಲಿ ಕಿಂಗ್ ಕೊಹ್ಲಿ ಒಂದು ಸ್ಥಾನ ಮೇಲೇರಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 69 ರನ್ ಬಾರಿಸಿ ಮಿಂಚಿದ್ದರು.

ಈ 69 ರನ್ಗಳೊಂದಿಗೆ ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಆರನೇ ಸ್ಥಾನದಲ್ಲಿ ಪಾಕಿಸ್ತಾನದ ಬ್ಯಾಟರ್ ಶೊಯೆಬ್ ಮಲಿಕ್ ಕಾಣಿಸಿಕೊಂಡಿದ್ದರು. ಇದೀಗ ಮಲಿಕ್ ಅವರನ್ನು ಹಿಂದಿಕ್ಕುವಲ್ಲಿ ಕೊಹ್ಲಿ ಯಶಸ್ವಿಯಾಗಿದ್ದಾರೆ.

ಶೊಯೆಬ್ ಮಲಿಕ್ ಟಿ20 ಕ್ರಿಕೆಟ್ನಲ್ಲಿ ಈವರೆಗೆ 515 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 10665 ಎಸೆತಗಳನ್ನು ಎದುರಿಸಿರುವ ಅವರು ಒಟ್ಟು 13571 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ಗಳಿಸಿ ಪಾಕ್ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದೀಗ ಕೇವಲ 398 ಟಿ20 ಇನಿಂಗ್ಸ್ಗಳಲ್ಲಿ ವಿರಾಟ್ ಕೊಹ್ಲಿ 13,612 ರನ್ಗಳಿಸಿದ್ದಾರೆ. ಈ ಮೂಲಕ ಶೊಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಕಿಂಗ್ ಕೊಹ್ಲಿ ಟಿ20 ರನ್ ಸರದಾರರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲದೆ ಟಿ20 ಇತಿಹಾಸದಲ್ಲೇ ಅತೀ ಹೆಚ್ಚು ರನ್ಗಳಿಸಿದ ವಿಶ್ವ ದಾಖಲೆ ಬರೆಯಲು ಮುನ್ನುಗ್ಗುತ್ತಿದ್ದಾರೆ.

ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳಿಸಿದ ವಿಶ್ವ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ 455 ಟಿ20 ಇನಿಂಗ್ಸ್ಗಳ ಮೂಲಕ ಒಟ್ಟು 14562 ರನ್ಗಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದೀಗ 13,612 ರನ್ ಕಲೆಹಾಕಿರುವ ಕೊಹ್ಲಿ ಇನ್ನು 951 ರನ್ಗಳಿಸಿದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ಗಳಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.