Updated on: May 02, 2023 | 7:22 PM
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ನ (IPL) 43ನೇ ಪಂದ್ಯವು ಹಲವು ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ನಿಗದಿತ 20 ಓವರ್ಗಳಲ್ಲಿ ಕೇವಲ 126 ರನ್ ಮಾತ್ರ ಕಲೆಹಾಕಿತ್ತು.
ಈ ಸುಲಭ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 108 ರನ್ಗಳಿಗೆ ಆಲೌಟ್ ಆಗುವ ಮೂಲಕ 18 ರನ್ಗಳಿಂದ ಸೋಲೋಪ್ಪಿಕೊಂಡಿತು. ಇದರ ನಡುವೆ ವಿರಾಟ್ ಕೊಹ್ಲಿ ಭರ್ಜರಿಯಾಗಿ ಸಂಭ್ರಮಿಸಿದ್ದರು. ಅದರಲ್ಲೂ ಏಟಿಗೆ ಎದಿರೇಟು ಎಂಬಂತೆ ಸಂಭ್ರಮದ ಮೂಲಕವೇ ಗೌತಮ್ ಗಂಭೀರ್ಗೆ ಟಾಂಗ್ ನೀಡಿದ್ದರು.
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 1 ವಿಕೆಟ್ನಿಂದ ರೋಚಕ ಜಯ ಸಾಧಿಸಿತ್ತು. ಈ ಗೆಲುವಿನ ಸಂಭ್ರಮದಲ್ಲಿ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಆರ್ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ವಿರಾಟ್ ಕೊಹ್ಲಿ ಕೂಡ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಟಾರ್ಗೆಟ್ ಮಾಡಿ ಸಂಭ್ರಮಿಸಿದ್ದರು. ಆದರೆ ಪಂದ್ಯದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೆಂಟರ್ ಗೌತಮ್ ಗಂಭೀರ್ ಹಾಗೂ ಕೊಹ್ಲಿ ನಡುವೆ ವಾಗ್ವಾದ ನಡೆಯಿತು.
ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಆದರೆ ಎಚ್ಚೆತ್ತ ಸಹ ಆಟಗಾರರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಇದೀಗ ಇದನ್ನೇ ಪರೋಕ್ಷವಾಗಿ ಪ್ರಸ್ತಾಪಿಸಿ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆ ವೈರಲ್ ಆಗಿದೆ.
ಆರ್ಸಿಬಿ ತಂಡದ ಡ್ರೆಸ್ಸಿಂಗ್ ರೂಮ್ ವಿಡಿಯೋದಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ, ಇದು ಅತ್ಯಂತ ಸಿಹಿಯಾದ ಗೆಲುವು. ನಿಮಗೆ ಕೊಡೋಕೆ ಗೊತ್ತಿದ್ರೆ, ಅದನ್ನ ಇಸ್ಕೋಳ್ಳೋಕು ಗೊತ್ತಿರಬೇಕು. ಇಲ್ಲದಿದ್ರೆ ಕೊಡೋಕೆ ಬರಬಾರದು ಎಂದು ಕಿಂಗ್ ಕೊಹ್ಲಿ ಖಡಕ್ ಕೌಂಟರ್ ನೀಡಿದ್ದಾರೆ.
ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆರ್ಸಿಬಿಯನ್ನು ಕೆಣಕಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ವಿರಾಟ್ ಕೊಹ್ಲಿ, ಕೊಟ್ಟರೆ, ನಾವು ತಿರುಗಿಸಿ ಕೊಡ್ತೀವಿ..ಇಲ್ಲದಿದ್ರೆ ನೀವು ಕೊಡೋಕೆ ನಿಲ್ಲಬಾರದು ಎಂಬಾರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ಇದೀಗ ಕಿಂಗ್ ಕೊಹ್ಲಿಯ ಈ ಖಡಕ್ ಕೌಂಟರ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿಯ ಈ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.