IPL 2025 Car Winner: ಈ ಬಾರಿ ಟಾಟಾ ಕಾರ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ?
IPL 2025 Award List: ಈ ಬಾರಿಯ ಐಪಿಎಲ್ನಲ್ಲಿ ಅನುಭವಿ ಆಟಗಾರರನ್ನೇ ಹಿಂದಿಕ್ಕಿ ಯುವ ಎಡಗೈ ದಾಂಡಿಗ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅದು ಕೂಡ ಕೇವಲ 14ನೇ ವಯಸ್ಸಿನಲ್ಲಿ ಎಂಬುದು ವಿಶೇಷ.
Updated on:Jun 04, 2025 | 11:14 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಕ್ಕೆ ತೆರೆಬಿದ್ದಿದೆ. ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಬಗ್ಗು ಬಡಿದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಆರ್ಸಿಬಿ ತಂಡ ಬಹುಮಾನ ಮೊತ್ತವಾಗಿ 20 ಕೋಟಿ ರೂ. ತನ್ನದಾಗಿಸಿಕೊಂಡಿದೆ.

ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಈ ಬಾರಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರೆ, ಬೌಲಿಂಗ್ನಲ್ಲಿ 25 ವಿಕೆಟ್ ಪಡೆದ ಗುಜರಾತ್ ಟೈಟಾನ್ಸ್ ತಂಡದ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.

ಅದೇ ರೀತಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರನಿಗೆ ನೀಡಲಾಗುವ ಪ್ರಶಸ್ತಿಯನ್ನು 40 ಸಿಕ್ಸ್ ಬಾರಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಿಕೋಲಸ್ ಪೂರನ್ ಪಡೆದಿದ್ದಾರೆ. ಹಾಗೆಯೇ ಈ ಬಾರಿಯ ಟೂರ್ನಿಯ ಮೋಸ್ಟ್ ವ್ಯಾಲುಯೆಬಲ್ ಪ್ಲೇಯರ್ ಪ್ರಶಸ್ತಿ ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ ಪಾಲಾಗಿದೆ.

ಇನ್ನು ಅದ್ಭುತ ಸ್ಟ್ರೈಕ್ ರೇಟ್ನೊಂದಿಗೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಸಫಾರಿ ಕಾರು ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಪಾಲಾಗಿದೆ. ಈ ಬಾರಿಯ ಟೂರ್ನಿಯ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ ಸೂರ್ಯವಂಶಿ, ಚೊಚ್ಚಲ ಪಂದ್ಯಾವಳಿಯಲ್ಲೇ ಪ್ರಮುಖ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ ಈ ಬಾರಿ 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ವೈಭವ್ ಸೂರ್ಯವಂಶಿ ಒಂದು ಶತಕದೊಂದಿಗೆ ಒಟ್ಟು 252 ರನ್ ಕಲೆಹಾಕಿದ್ದಾರೆ. ಅದು ಕೂಡ 206.55 ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ. ಈ ಮೂಲಕ ಈ ವರ್ಷದ ಸೂಪರ್ ಸ್ಟ್ರೈಕರ್ ಎನಿಸಿಕೊಂಡಿದ್ದಾರೆ. ಅದರಂತೆ ಸೂಪರ್ ಸ್ಟ್ರೈಕರ್ಗೆ ನೀಡಲಾಗುವ ಟಾಟಾ ಕರ್ವ್ ಕಾರು 14 ವರ್ಷದ ವೈಭವ್ ಸೂರ್ಯವಂಶಿ ಪಾಲಾಗಿದೆ.
Published On - 11:11 am, Wed, 4 June 25









