- Kannada News Photo gallery Cricket photos Will Shikhar Dhawan Join Politics Before 2024 General Elections Indian Opener Interesting Reply
Shikhar Dhawan: ಕ್ರಿಕೆಟಿಕ ಶಿಖರ್ ಧವನ್ ರಾಜಕೀಯಕ್ಕೆ ಎಂಟ್ರಿ; ಈ ಬಗ್ಗೆ ಗಬ್ಬರ್ ಹೇಳಿದ್ದೇನು ಗೊತ್ತಾ?
Shikhar Dhawan: ನಾನು ರಾಜಕೀಯಕ್ಕೆ ಸೇರಬೇಕು ಎಂಬುದು ದೇವರ ಇಚ್ಛೆಯಾಗಿದ್ದರೆ, ನಾನು ಖಂಡಿತವಾಗಿಯೂ ಅದನ್ನು ಮಾಡುತ್ತೇನೆ ಎಂದಿದ್ದಾರೆ.
Updated on:Mar 27, 2023 | 3:55 PM

ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗುಳಿದಿರುವ ಆರಂಭಿಕ ಆಟಗಾರ ಶಿಖರ್ ಧವನ್ಗೆ ಟೀಂ ಇಂಡಿಯಾದ ಕದ ಭಾಗಶಃ ಮುಚ್ಚಿದಂತ್ತಾಗಿದೆ. ಧವನ್ ಜಾಗವನ್ನು ಶುಭ್ಮನ್ ಗಿಲ್ ಆಕ್ರಮಿಸಿಕೊಂಡಿರುವುದರಿಂದ ಧವನ್ಗೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುವುದು ಅಸಾಧ್ಯ. ಹೀಗಾಗಿ ಟಿ20 ಲೀಗ್ ಕಡೆ ಹೆಚ್ಚು ಗಮನ ಹರಿಸುತ್ತಿರುವ ಧವನ್, ಐಪಿಎಲ್ನಲ್ಲಿ ಪಂಜಾಬ್ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ.

ಇತ್ತ ಐಪಿಎಲ್ನಲ್ಲೂ ಧವನ್ ಪ್ರದರ್ಶನ ಹೇಳಿಕೊಳ್ಳುವಂತಿರದಿದ್ದರೆ, ಅಲ್ಲೂ ಕೂಡ ಅವರಿಗೆ ಖಾಯಂ ಜಾಗ ಸಿಗುವುದು ಕಷ್ಟ. ಹೀಗಾಗಿ ತನ್ನ ಮುಂದಿನ ಭವಿಷ್ಯದತ್ತ ಗಮನಹರಿಸುತ್ತಿರುವ ಧವನ್ಗೆ ರಾಜಕೀಯಕ್ಕೆ ಬರುವ ಆಸಕ್ತಿಯ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿರುವ ಧವನ್ ತನ್ನ ಮುಂದಿನ ರಾಜಕೀಯದ ನಡೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ವಾಸ್ತವವಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ, 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ರಾಜಕೀಯಕ್ಕೆ ಸೇರುವ ಯೋಜನೆ ಬಗ್ಗೆ ಧವನ್ ಬಳಿ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ಧವನ್, ಪ್ರಸ್ತುತ ಅಂತಹ ಯಾವುದೇ ಯೋಜನೆಗಳಿಲ್ಲ. ಆದರೆ ಭವಿಷ್ಯದಲ್ಲಿ ಅಂತಹ ಯಾವುದೇ ಅವಕಾಶ ಸಿಕ್ಕರೆ, ನಾನು ಅದರಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

ಈ ಬಗ್ಗೆ ಮುಂದುವರೆದು ಮಾತನಾಡಿರುವ ಧವನ್, ನಾನು ಯಾವ ಕ್ಷೇತ್ರಕ್ಕೆ ಹೋದರೂ ನಾನು ನನ್ನ 100 ಪ್ರತಿಶತವನ್ನು ನೀಡುತ್ತೇನೆ. ಇದರಿಂದ ಯಶಸ್ಸು ಖಚಿತ ಎಂದು ನನಗೆ ತಿಳಿದಿದೆ. ಇಲ್ಲಿಯವರೆಗೆ, ನಾನು ರಾಜಕೀಯಕ್ಕೆ ಸೇರುವ ನನ್ನ ಯೋಜನೆಗಳ ಬಗ್ಗೆ ಯಾರೊಂದಿಗೂ ಮಾತನಾಡಿಲ್ಲ. ಆದರೆ ದೇವರ ಇಚ್ಛೆ ಏನು ಎಂಬುದು ನಮಗೆ ತಿಳಿದಿಲ್ಲ. ನಾನು ರಾಜಕೀಯಕ್ಕೆ ಸೇರಬೇಕು ಎಂಬುದು ದೇವರ ಇಚ್ಛೆಯಾಗಿದ್ದರೆ, ನಾನು ಖಂಡಿತವಾಗಿಯೂ ಅದನ್ನು ಮಾಡುತ್ತೇನೆ ಎಂದಿದ್ದಾರೆ.

2022 ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದ್ದ ಧವನ್, ಅಂದಿನಿಂದ ಭಾರತೀಯ ತಂಡದಿಂದ ಹೊರಗುಳಿದಿದ್ದಾರೆ. 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ ದೆಹಲಿ ಮೂಲದ ಧವನ್, 50 ಓವರ್‌ಗಳ ಸ್ವರೂಪದಲ್ಲಿ 167 ಪಂದ್ಯಗಳಲ್ಲಿ 6793 ರನ್ ಬಾರಿಸಿದ್ದಾರೆ.
Published On - 3:54 pm, Mon, 27 March 23




