ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಸೀಸನ್-2 ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ (MI), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಪ್ಲೇಆಫ್ಗೆ ಪ್ರವೇಶಿಸಿದೆ. ಇನ್ನು ಯುಪಿ ವಾರಿಯರ್ಸ್ (UPW) ಮತ್ತು ಗುಜರಾತ್ ಜೈಂಟ್ಸ್ (GG) ತಂಡಗಳು WPLನಿಂದ ಹೊರಬಿದ್ದಿದೆ.
ಇತ್ತ ಪ್ಲೇಆಫ್ ಪ್ರವೇಶಿಸಿರುವ ಮೂರು ತಂಡಗಳಲ್ಲಿ ಒಂದು ತಂಡ ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ. ಅಂದರೆ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡ ಫೈನಲ್ಗೆ ಎಂಟ್ರಿ ಕೊಡಲಿದೆ.
ಇನ್ನು ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಮತ್ತು 3ನೇ ಸ್ಥಾನ ಅಲಂಕರಿಸುವ ತಂಡಗಳು ಎಲಿಮಿನೇಟರ್ ಪಂದ್ಯಗಳನ್ನಾಡಲಿದೆ. ಇದೀಗ ಆರ್ಸಿಬಿ ತಂಡವು 3ನೇ ಸ್ಥಾನದಲ್ಲಿದ್ದು, ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್ ಪಂದ್ಯವಾಡುವುದು ಖಚಿತ.
ಒಂದು ವೇಳೆ ಶುಕ್ರವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಮುಂದಿನ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ. ಇಲ್ಲಿ ಆರ್ಸಿಬಿ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಯಾರು ಫೈನಲ್ಗೆ: ಪ್ರಸ್ತುತ ಅಂಕ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಗ್ರಸ್ಥಾನದಲ್ಲಿದೆ. ಇನ್ನು ದ್ವಿತೀಯ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡವಿದೆ. ಆದರೆ ಇಲ್ಲಿ ಉಭಯ ತಂಡಗಳು 10 ಅಂಕಗಳನ್ನು ಹೊಂದಿದೆ. ಇದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೊನೆಯ ಪಂದ್ಯ ಬಾಕಿಯಿದ್ದು, ಈ ಪಂದ್ಯದಲ್ಲಿ ಗೆದ್ದರೆ ಫೈನಲ್ಗೆ ಪ್ರವೇಶಿಸುವುದು ಖಚಿತ.
ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ ಹೀನಾಯವಾಗಿ ಸೋತರೆ, ಮುಂಬೈ ಇಂಡಿಯನ್ಸ್ ತಂಡವು ನೆಟ್ ರನ್ ರೇಟ್ ನೆರವಿನಿಂದ ಫೈನಲ್ಗೆ ಪ್ರವೇಶಿಸಲಿದೆ. ಹೀಗಾಗಿ ಇಂದಿನ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫೈನಲ್ ಭವಿಷ್ಯವನ್ನು ನಿರ್ಧರಿಸಲಿದೆ ಎಂದರೆ ತಪ್ಪಾಗಲಾರದು.
Published On - 1:54 pm, Wed, 13 March 24