ಜೂನ್ 7ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲ್ಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಇನ್ನೇನು 3 ದಿನಗಳು ಮಾತ್ರ ಬಾಕಿ ಉಳಿದಿವೆ. ಫೈನಲ್ ಪಂದ್ಯಕ್ಕಾಗಿ ಉಭಯ ತಂಡಗಳ ಹಂತಿಮ ಹಂತದ ತಯಾರಿ ಕೂಡ ಮುಗಿದಿದೆ. ಇದರೊಂದಿಗೆ ಉಭಯ ತಂಡಗಳ ಆಟಗಾರರು ತಮ್ಮ ತಮ್ಮ ತಂಡದ ಹಿರಿಯ ಕ್ರಿಕೆಟಿಗರ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅವರಲ್ಲಿ ಟೀಂ ಇಂಡಿಯಾದ ಕಿಂಗ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಕೂಡ ಸೇರಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಈ ಇಬ್ಬರೂ ಆಟಗಾರರು ತಮ್ಮ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಆಸೀಸ್ ವಿರುದ್ಧ ಬಾರಿಸಿರುವ ರನ್ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಈ ಫೈನಲ್ ಪಂದ್ಯದಲ್ಲಿ ಈ ಇಬ್ಬರೂ ಶತಕದ ಇನ್ನಿಂಗ್ಸ್ ಆಡಿದರೆಂದರೆ ಗುರು ದ್ರಾವಿಡ್ ದಾಖಲೆ ಪುಡಿಪಡಿಯಾಗುವುದಂತ್ತೂ ಖಚಿತ.
ವಾಸ್ತವವಾಗಿ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಬಾರಿಸಿರುವ ಭಾರತದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ನಂತರ ರಾಹುಲ್ ದ್ರಾವಿಡ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಕಾಂಗರೂ ತಂಡದ ವಿರುದ್ಧ ದಿ ವಾಲ್, 32 ಟೆಸ್ಟ್‌ಗಳ 60 ಇನ್ನಿಂಗ್ಸ್‌ಗಳಲ್ಲಿ 2143 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 13 ಅರ್ಧ ಶತಕಗಳು ಸೇರಿವೆ.
ಈಗ ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿರುವ ಪೂಜಾರ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪೂಜಾರ ಇದುವರೆಗೆ ಆಸೀಸ್ ವಿರುದ್ಧ ಆಡಿರುವ 24 ಟೆಸ್ಟ್‌ಗಳ 43 ಇನ್ನಿಂಗ್ಸ್‌ಗಳಲ್ಲಿ 2033 ರನ್ ಬಾರಿಸಿದ್ದಾರೆ. ಅಂದರೆ, ರಾಹುಲ್ ದ್ರಾವಿಡ್ ಅವರ ರನ್ ದಾಖಲೆಯನ್ನು ಹಿಂದಿಕ್ಕಬೇಕಾದರೆ, ಪೂಜಾರ ಈ ಫೈನಲ್‌ನ ಎರಡೂ ಇನ್ನಿಂಗ್ಸ್‌ಗಳನ್ನು ಸೇರಿಸಿ ಒಟ್ಟು 110 ರನ್ ಕಲೆಹಾಕಬೇಕಿದೆ.
ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ವಿರುದ್ಧದ 24 ಟೆಸ್ಟ್‌ಗಳ 42 ಇನ್ನಿಂಗ್ಸ್‌ಗಳಲ್ಲಿ 1979 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಸದ್ಯಕ್ಕೆ ರನ್ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ. ಆದರೆ, ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಪುಡಿಗಟ್ಟಬೇಕಾದರೆ, ಕೊಹ್ಲಿ ಈ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ನ ಎರಡೂ ಇನ್ನಿಂಗ್ಸ್‌ಗಳನ್ನು ಸೇರಿಸಿ ಒಟ್ಟು 164 ರನ್ ಬಾರಿಸಬೇಕಾಗಿದೆ.
ಇನ್ನು ಓವಲ್‌ನಲ್ಲಿ ಈ ಇಬ್ಬರು ಆಟಗಾರರ ಅಂಕಿ-ಅಂಶಗಳನ್ನು ನೋಡುವುದಾದರೆ.. ಓವಲ್‌ನಲ್ಲಿ ವಿರಾಟ್ ಕೊಹ್ಲಿ 3 ಟೆಸ್ಟ್‌ಗಳ 6 ಇನ್ನಿಂಗ್ಸ್‌ಗಳಲ್ಲಿ 28.16 ಸರಾಸರಿಯಲ್ಲಿ ಕೇವಲ 169 ರನ್ ಬಾರಿಸಿದ್ದಾರೆ. ಮತ್ತೊಂದೆಡೆ, ಚೇತೇಶ್ವರ ಪೂಜಾರ 3 ಟೆಸ್ಟ್‌ಗಳ 6 ಇನ್ನಿಂಗ್ಸ್‌ಗಳಲ್ಲಿ 19.50 ಸರಾಸರಿಯಲ್ಲಿ ಕೇವಲ 117 ರನ್ ಸಿಡಿಸಿದ್ದಾರೆ. ಹೀಗಾಗಿ ಈ ಫೈನಲ್‌ನಲ್ಲಿ ಈ ಇಬ್ಬರು ದ್ರಾವಿಡ್ ಅವರ ದಾಖಲೆಯನ್ನು ಮುರಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
Published On - 1:42 pm, Sun, 4 June 23