- Kannada News Photo gallery Devanahalli: Father marries 11 couples for the same amount of money without spending a fortune on his son's wedding
ಮಗನ ಮದುವೆಗೆ ದುಂದು ವೆಚ್ಚ ಮಾಡದೆ ಅದೇ ಖರ್ಚಿನಲ್ಲಿ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಬೆಂಗಳೂರು ಗ್ರಾಮಾಂತರದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ತಂದೆಯೊಬ್ಬರು ತಮ್ಮ ಮಗನ ಮದುವೆಯನ್ನು ಆಡಂಬರವಿಲ್ಲದೆ ಮಾಡಿ, ಅದೇ ಖರ್ಚಿನಲ್ಲಿ 11 ಬಡ ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸಿ ಮಾದರಿಯಾಗಿದ್ದಾರೆ. ಆ ಮೂಲಕ ಸರಳ ವಿವಾಹದ ಮಹತ್ವವನ್ನು ಎತ್ತಿ ಹೇಳಿದ್ದಾರೆ. ಫೋಟೋಸ್ ಇಲ್ಲಿವೆ ನೋಡಿ.
Updated on:Jul 29, 2025 | 8:49 AM

ಮದುವೆ ಅಂದರೆ ಸಾಕು ಅಲ್ಲಿ ಆಡಂಬರ, ಸಡಗರ-ಸಂಭ್ರಮ ಎದ್ದು ಕಾಣುವುದು ಸಹಜ. ಅದರಲ್ಲೂ ಮರ್ಯಾದೆ ಪ್ರಶ್ನೆ ಅಂತ ಬಹುತೇಕರು ಸಾಲ ಸೋಲ ಮಾಡಿ ಮದುವೆ ಮಾಡುತ್ತಾರೆ. ಆದರೆ ಇಂತವರ ನಡುವೆ ಇಲ್ಲೊಂದು ಕಡೆ ಲಕ್ಷ ಲಕ್ಷ ಹಣವಿದ್ದರೂ ಮಗನ ಮದುವೆಗೆ ದುಂದು ವೆಚ್ಚ ಮಾಡದೆ ಅದೇ ಖರ್ಚಿನಲ್ಲಿ 11 ನವಜೋಡಿ ಮದುವೆ ಮಾಡಿಸುವ ಮೂಲಕ ಮಾನವೀಯತೆ ಮೆರೆದು ಮಾದರಿ ಆಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಂಬಳಿಪುರದ ಕಾಟೇರಮ್ಮ ದೇವಸ್ಥಾನದಲ್ಲಿ ಮಗನ ಮದುವೆ ಜೊತೆಗೆ ಇತರೆ 11 ನವಜೋಡಿಗಳ ಸಾಮೂಹಿಕ ಮದುವೆ ಮಾಡುವ ಮೂಲಕ ತಂದೆಯೊಬ್ಬರು ಮಾದರಿಯಾಗಿದ್ದಾರೆ.

ಕಾಟೇರಮ್ಮ ದೇವಸ್ತಾನದ ಧರ್ಮದರ್ಶಿಯಾಗಿರುವ ರಾಮು ಎಂಬುವವರು ಸೋಮವಾರ ತಮ್ಮ ಮಗನ ವಿವಾಹವನ್ನ ಮಾಡಿದ್ದಾರೆ. ಯಾವುದೇ ರೀತಿಯ ದುಂದು ವೆಚ್ಚ ಮಾಡದೆ ಅದೇ ಹಣದಲ್ಲಿ ಬಡ ಮತ್ತು ಮಧ್ಯಮ ವರ್ಗದ 11 ಜನ ನವ ಜೋಡಿಗಳಿಗೆ ಮದುವೆ ಮಾಡಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ವೇದಿಕೆ ನಿರ್ಮಾಣ ಮಾಡಿ ನಾಲ್ಕೈದು ಜನ ಪಂಡಿತರೊಂದಿಗೆ 11 ನವಜೋಡಿಗಳಿಗೆ ಕಂಕಣ ಭಾಗ್ಯ ನೀಡಿದ್ದಾರೆ.

ತಂದೆ-ತಾಯಿ ಮತ್ತು ಕುಟುಂಬ ಸದಸ್ಯರು ಹಾಗೂ ಭಕ್ತರ ಸಮ್ಮುಖದಲ್ಲಿ ತಮ್ಮ ಮಗನ ಮದುವೆ ಜೊತೆಗೆ 11 ನವಜೋಡಿಗಳ ಮದುವೆ ಮಾಡಿದ್ದು, ಆ ಮೂಲಕ ಮದುವೆಗೆ ದುಂದು ವೆಚ್ಚ ಮಾಡುವ ಬದಲು ಕಷ್ಟದಲ್ಲಿರುವವರಿಗೆ ನೆರವಾಗುವಂತೆ ರಾಮು ಅವರು ಸಂದೇಶ ಸಾರಿದ್ದಾರೆ.

ಬೆಳಗ್ಗೆ ದೇವಸ್ಥಾನದಲ್ಲಿ ಮಗನ ಮದುವೆ ಮಾಡಿದ ನಂತರ ಅದೇ ವೇದಿಕೆಯಲ್ಲಿ 11 ನವಜೋಡಿಗಳಿಗೆ ಕಲ್ಯಾಣ ಮಾಡಿಸಿದ್ದಾರೆ. ಜೊತೆಗೆ ನೂತನವಾಗಿ ದೇವಸ್ತಾನದಲ್ಲಿ ಸಾಮೂಹಿಕ ವಿವಾಗದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳಲ್ಲಿ ವಧುವಿಗೆ ಸೀರೆ, ವರನಿಗೆ ಶರ್ಟ್, ಪಂಚೆ, ಪೇಟ, ಚಿನ್ನದ ತಾಳಿ ಮತ್ತು 10 ಸಾವಿರ ರೂ ನಗದು ಉಡುಗೊರೆ ನೀಡಿದ್ದಾರೆ.

ಇನ್ನೂ ವಿವಾಹಕ್ಕೆ ಬಂದ ತಮ್ಮ ಬಂದು ಬಳಗ ಸೇರಿದಂತೆ 11 ನವ ದಂಪತಿಗಳ ಕುಟುಂಬಸ್ಥರು, ಭಕ್ತರಿಗೆಲ್ಲ ದೇವಸ್ಥಾನದಲ್ಲಿ ಮದುವೆ ಊಟವನ್ನು ಹಾಕಿಸಿ ಸರಳ ವಿವಾಹಕ್ಕೆ ಒತ್ತು ನೀಡುವಂತೆ ಜಾಗೃತಿ ಮೂಡಿಸಿದರು.

ಒಟ್ಟಾರೆ ಆಡಂಬರದ ಮದುವೆಗಾಗಿ ಆಸ್ತಿ-ಪಾಸ್ತಿ ಮಾರಿ ಸಾಲ ಸೋಲ ಮಾಡಿ ಪರದಾಡುವ ಸಾಕಷ್ಟು ಜನರ ನಡುವೆ ಆಡಂಬರದ ಮದುವೆ ಮಾಡುವ ಶಕ್ತಿ ಇದ್ದರೂ ಸರಳವಾಗಿ ಮಗನ ಮದುವೆ ಮಾಡುವುದಲ್ಲದೆ ಅದೇ ವೇದಿಕೆಯಲ್ಲಿ 11 ನವ ಜೋಡಿಗಳಗೆ ಕಂಕಣ ಭಾಗ್ಯ ಕಲ್ಪಿಸಿರುವುದು ನಿಜಕ್ಕೂ ಮಾದರಿ.
Published On - 8:48 am, Tue, 29 July 25



