ಎಲ್ಲಾ ಕೆಲಸಕ್ಕೂ ಎಡಗೈ ಬಳಸುವವರಿಗೆ ಈ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ ಎನ್ನುತ್ತೆ ಸಂಶೋಧನೆ!
ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ಪ್ರಕಟವಾದ ಅಧ್ಯಯನವು ಇತರರಿಗೆ ಹೋಲಿಸಿದರೆ ಎಡಗೈ ಬಳಸುವ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಎಂದು ಹೇಳಿದೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲವಾದರೂ ಸಂಶೋಧಕರು ಎಡಗೈಯನ್ನು ಹೆಚ್ಚಾಗಿ ಬಳಕೆ ಮಾಡುವ ಜನರಲ್ಲಿ ರೋಗಗಳ ಸಂಭವ ಹೆಚ್ಚು ಎಂದು ಕಂಡುಕೊಂಡಿದ್ದಾರೆ. ಹಾಗಾದರೆ ಇವರಲ್ಲಿ ಹೆಚ್ಚಾಗಿ ಕಂಡು ಬರುವ ಸಮಸ್ಯೆಗಳು ಯಾವವು? ಇಲ್ಲಿದೆ ಮಾಹಿತಿ.
Updated on: Apr 24, 2025 | 5:31 PM

ಮನುಷ್ಯನಿಗೆ ಎರಡು ಕೈಗಳಿದ್ದರೂ ಕೂಡ ಯಾವುದಾದರೂ ಒಂದು ಕೈಯಿಂದ ಹೆಚ್ಚು ಕೆಲಸ ಮಾಡುತ್ತಾನೆ. ಜನಸಂಖ್ಯೆಯ ಬಹುಪಾಲು ಜನರು ಹೆಚ್ಚಾಗಿ ಬಲಗೈ ಬಳಸುತ್ತಾರೆ. ಎಡಗೈಯನ್ನು ಮಿತವಾಗಿ ಬಳಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದ ಜನಸಂಖ್ಯೆಯ ಕೇವಲ 10 ಪ್ರತಿಶತದಷ್ಟು ಜನರು ಮಾತ್ರ ತಮ್ಮ ಎಡಗೈಯನ್ನು ಬರೆಯಲು, ತಿನ್ನಲು ಮತ್ತು ಇತರ ಕಾರ್ಯಗಳಿಗೆ ಬಳಸುತ್ತಾರೆ. 90 ರಷ್ಟು ಜನರು ಬಲಗೈಯನ್ನು ಬಳಸುತ್ತಾರೆ.

ಆದರೆ ಎಡಗೈಯನ್ನು ಹೆಚ್ಚಾಗಿ ಬಳಸುವವರ ಮೇಲೆ ನಡೆದ ಸಂಶೋಧನೆಯೊಂದು ಇತರರಿಗೆ ಹೋಲಿಸಿದರೆ ಎಡಗೈ ಬಳಸುವ ಜನರು ಕೆಲವು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಾಗಿ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ. ಹೌದು, ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ಪ್ರಕಟವಾದ ಅಧ್ಯಯನವು ಎಡಗೈಯನ್ನು ಹೆಚ್ಚಾಗಿ ಬಳಕೆ ಮಾಡುವ ಜನರಲ್ಲಿ ರೋಗಗಳ ಸಂಭವ ಹೆಚ್ಚು ಎಂದು ಕಂಡುಕೊಂಡಿದೆ.

ಬಲಗೈಯಿಂದ ಕೆಲಸ ಮಾಡುವ ಮಹಿಳೆಯರಿಗಿಂತ ಎಡಗೈಯಿಂದ ಕೆಲಸ ಮಾಡುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂದು ಸಂಶೋಧನೆ ತೋರಿಸಿ ಕೊಟ್ಟಿದೆ. ಗರ್ಭಾವಸ್ಥೆಯಲ್ಲಿ ಈಸ್ಟ್ರೊಜೆನ್ ನ ಅತಿಯಾದ ಬಿಡುಗಡೆಯಿಂದಾಗಿ ಎಡಗೈ ಬಳಕೆ ಮಾಡುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಹೆಚ್ಚಿನ ಅಪಾಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಎಡಗೈ ಬಳಕೆ ಮಾಡುವವರಲ್ಲಿ ಸ್ಕಿಜೋಫ್ರೇನಿಯಾದಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಈ ಅಧ್ಯಯನದಿಂದ ಸ್ಪಷ್ಟವಾಗಿದೆ. ಭ್ರಮೆ, ವಿಪರೀತ ಆಲೋಚನೆ, ನಡವಳಿಕೆಗೆ ಮಿಶ್ರ ಪ್ರತಿಕ್ರಿಯೆ ಸ್ಕಿಜೋಫ್ರೇನಿಯಾದ ಮುಖ್ಯ ಲಕ್ಷಣಗಳಾಗಿವೆ. ಇದಲ್ಲದೆ, ಎಡಗೈ ಬಳಕೆ ಮಾಡುವ ವ್ಯಕ್ತಿಗಳಲ್ಲಿ ಹಲವಾರು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಅಪಾಯ ಕಂಡು ಬಂದಿದೆ.

ಅಂತೆಯೇ, ಇತರ ಅನೇಕ ನರವೈಜ್ಞಾನಿಕ ಕಾಯಿಲೆಗಳು ಕೂಡ ಎಡಗೈ ಬಳಸುವ ಜನರಲ್ಲಿ ಹೆಚ್ಚು ಕಂಡುಬರುತ್ತದೆ. ಇವುಗಳಲ್ಲಿ ಗಮನದ ಕೊರತೆ, ಹೈಪರ್ಆಕ್ಟಿವಿಟಿ ಅಸ್ವಸ್ಥತೆ, ಆಟಿಸಂ ಮತ್ತು ಡಿಸ್ಪ್ರಾಕ್ಸಿಯಾ ಸೇರಿವೆ. ಜೊತೆಗೆ ಎಡಗೈ ಬಳಸುವ ಜನರಿಗೆ ಹೃದ್ರೋಗದ ಅಪಾಯ ಹೆಚ್ಚು ಅದಲ್ಲದೆ ಬಲಗೈಯಿಂದ ಕೆಲಸ ಮಾಡುವವರಿಗಿಂತ ಎಡಗೈಯಿಂದ ಕೆಲಸ ಮಾಡುವ ಜನರು ಸರಾಸರಿ 9 ವರ್ಷ ಮುಂಚಿತವಾಗಿ ಸಾಯುತ್ತಾರೆ ಎಂದು ವರದಿ ಬಹಿರಂಗ ಪಡಿಸಿದೆ.



















