- Kannada News Photo gallery Do you swallow live fish eating for cough asthma asthma in vijayapura district See here
ಕೆಮ್ಮು, ದಮ್ಮು, ಅಸ್ತಮಾ ಕಾಯಿಲೆಗಳಿಗೆ ಜೀವಂತ ಮೀನಿನ ಮರಿಗಳನ್ನು ನುಂಗಿಸ್ತಾರೆ? ಇಲ್ಲಿದೆ ನೋಡಿ
ಕೆಮ್ಮು, ದಮ್ಮು, ಅಸ್ತಮಾ ಸೇರಿದಂತೆ ಇತರೇ ಕಾಯಿಲೆಗಳಿಂದ ಬಳಲುತ್ತಿದ್ದವರಿಗೆ, ಈ ಸಮಯದಲ್ಲಿ ಆಯುರ್ವೇದ ಔಷಧಿಯೊಂದಿಗೆ ಜೀವಂತ ಮೀನಿನ ಮರಿಗಳನ್ನು ನುಂಗಿಸುವ ಮೂಲಕ ಆಯುರ್ವೇದಿಕ್ ಚಿಕಿತ್ಸೆಯೊಂದನ್ನು ಕೊಡಲಾಗುತ್ತದೆ. ವರ್ಷಕ್ಕೊಮ್ಮೆ ನಡೆಯುವ ಈ ಚಿಕಿತ್ಸೆಗೆ 1500ಕ್ಕೂ ಅಧಿಕ ರೋಗಿಗಳು ಬಂದು ಚಿಕಿತ್ಸೆ ಪಡೆದಿದ್ದಾರೆ. ಅಚ್ಚರಿ ಮೂಡಿಸುವ ಆಯುರ್ವೇದಿಕ ಚಿಕಿತ್ಸೆಯೊಂದರ ಕುರಿತು ವರದಿ ಇಲ್ಲಿದೆ ನೋಡಿ.
Updated on: Jun 10, 2023 | 3:03 PM

ಮೃಗಶಿರಾ ಮಳೆಯ ನಕ್ಷತ್ರ ಅಸ್ತಮಾ ರೋಗಿಗಳಿಗೆ ವರದಾನ, ಔಷಧಿಯುಕ್ತ ಮೀನುಮರಿ ನುಂಗಿದ್ರೆ, ಸಾಕು ಕಾಯಿಲೆ ಮಾಯ. ಮೂರು ವರ್ಷ ಸೇವಿಸಿದರೆ ಹಲವು ಕಾಯಿಲೆಗಳಿಗೆ ಮುಕ್ತಿ. ಹೌದು, ಇಂತಹದ್ದೊಂದು ಚಿಕಿತ್ಸೆ ಸಿಗೋದು ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಸ್ವಾಮಿ ವಿವೇಕಾನಂದ ಸರ್ಕಲ್ ಬಳಿ ಇರುವ ಡಾ. ಭಾವಿಕಟ್ಟಿ ಕ್ಲಿನಿಕ್ನಲ್ಲಿ. ಅದು ಕೂಡ ವರ್ಷಕ್ಕೊಮ್ಮೆ ಬರುವ ಮೃಗಶಿರಾ ಮಳೆಯ ನಕ್ಷತ್ರದ ದಿನದಂದು ಮಾತ್ರ ಎಂಬುದು ವಿಶೇಷ.

ಜೂನ್ ತಿಂಗಳಿನಲ್ಲಿ ಬರುವ ಮೃಗಶಿರ ಮಳೆ ರೈತರ ಬಿತ್ತನೆಗೆ ಅನುಕೂಲ ಮಾಡುವುದು, ಎಲ್ಲೆಡೆ ಹಸಿರು ಚಿಗುರುವಂತೆ ಮಾಡುವ ಮೂಲಕ ಪ್ರಕೃತಿಗೆ ಮಾತ್ರವಲ್ಲದೇ ಮನುಷ್ಯರಿಗೂ ಕೂಡ ವರದಾನ ಎಂದರೆ ತಪ್ಪಾಗಲಿಕ್ಕಿಲ್ಲ. ಯಾಕಂದರೆ ಬೇಸಿಗೆ ಬಿಸಿಲಿನಿಂದ ಬಳಲಿದ್ದವರಿಗೆ ತಂಪು ಎರೆಯುವ ಮೊದಲ ಮಳೆಯಾಗಿರುವ ಈ ಮೃಗಶಿರಾ ಬರುತ್ತಿದ್ದಂತೆ, ಮೀನುಮರಿ ನುಂಗಿಸುವ ಆಯುರ್ವೇದಿಕ ಚಿಕಿತ್ಸೆ ಶುರುವಾಗುತ್ತದೆ.

ಕಳೆದ 70 ವರ್ಷಗಳಿಂದಲೂ ಡಾ. ಭಾವಿಕಟ್ಟಿಯವರ ಆಸ್ಪತ್ರೆಯಲ್ಲಿ ಇಂತಹದ್ದೊಂದು ಚಿಕಿತ್ಸೆಯನ್ನು ಉಚಿತವಾಗಿ ಕೊಡಲಾಗುತ್ತದೆ. ಕಳೆದ 70 ವರ್ಷಗಳ ಹಿಂದೆ ಡಾ. ಎಂ ಎಸ್ ಭಾವಿಕಟ್ಟಿ ಎಂಬುವವರು ಶುರು ಮಾಡಿರುವ ಈ ಆಯುರ್ವೇದಿಕ ಚಿಕಿತ್ಸೆ ತಲೆತಲಾಂತರದಿಂದ ಮುಂದುವರೆದಿದ್ದು, ಇದೀಗ ಅವರ ಮೊಮ್ಮಗ ಎಂಬಿಬಿಎಸ್ ವೈದ್ಯರಾಗಿರುವ ಡಾ. ಸಂಗಮೇಶ ಪಾಟೀಲ್ ಅವರು ಮುಂದುವರೆಸಿಕೊಂಡು ಬಂದಿದ್ದಾರೆ.

ಚಿಕಿತ್ಸೆಯ ವಿಧಾನ ಕೇಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಿ. ಯಾಕಂದರೆ ಅರಿಷಿಣ, ಇಂಗು ಸೇರಿದಂತೆ ಐದು ಬಗೆಯ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರು ಮಾಡಿರುವ ಔಷಧಿಯನ್ನು ಪುಟ್ಟ ಪುಟ್ಟ ಜೀವಂತ ಮೀನು ಮರಿಗಳ ಬಾಯಲ್ಲಿ ಇರಿಸಿ ರೋಗಿಗಳ ಬಾಯಲ್ಲಿಟ್ಟು ನುಂಗಿಸಲಾಗುತ್ತದೆ. ಹೀಗೆ ಮಾಡುವುದರಿಂದ ಜೀವಂತ ಮೀನುಮರಿ ಔಷಧಿ ಸಮೇತ ಬಾಯಿಂದ ಹೊಟ್ಟೆಗೆ ಹೋಗಿ ಅಲ್ಲೆಲ್ಲ ಓಡಾಡುವುದರಿಂದ ಕೆಮ್ಮು, ದಮ್ಮಿಗೆ ಕಾರಣವಾಗಿರುವ ಅಸ್ತಮಾದ ಜಿಡ್ಡುಗಟ್ಟಿದ ಪೊರೆ ಹರಿಯುತ್ತದಂತೆ.

ಅಲ್ಲದೆ ಅಸ್ತಮಾಕ್ಕೆ ಮೀನಿನ ಎಣ್ಣೆಯ ಚಿಕಿತ್ಸೆ ಕೊಡುವುದರಿಂದ ಅದು ಗುಣವಾಗುತ್ತದಂತೆ. ಹೀಗೆ ಓರ್ವ ರೋಗಿಗೆ ವರ್ಷಕ್ಕೊಮ್ಮೆಯಂತೆ ನಿರಂತರವಾಗಿ ಮೂರು ವರ್ಷ ಮಾಡುವುದರಿಂದ ಕೆಮ್ಮು, ದಮ್ಮು, ಅಸ್ತಮಾ, ಕಫ, ಶೀತ, ಉಬ್ಬಸ, ಇತರೇ ಅಲರ್ಜಿಗಳು ಸೇರಿದಂತೆ ಹಲವು ರೋಗಗಳು ಮಾಯವಾಗುತ್ತವೆ.

ಈ ಮತ್ಸ್ಯ ಚಿಕಿತ್ಸೆಯನ್ನು ಪಡೆಯಲು ಕೆಲವು ನಿಯಮಾವಳಿಗಳಿವೆ. ಅವುಗಳೆಂದರೆ, ಮೃಗಶಿರ ಮಳೆಯ ನಕ್ಷತ್ರ ಕೂಡುವ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಂದು, ಔಷಧಿಯುಕ್ತ ಮೀನುಮರಿ ನುಂಗಬೇಕು. ಬಳಿಕ ಬಜ್ಜಿ, ಬೋಂಡಾ ಸೇರಿದಂತೆ ಯಾವುದೇ ಕರಿದ ಪದಾರ್ಥಗಳನ್ನು ಸೇವಿಸಬಾರದು. ಇದಕ್ಕೂ ಮುಖ್ಯವಾಗಿ ಮದ್ಯಪಾನ ಹಾಗೂ ಧೂಮಪಾನ ಮಾಡಲೇಬಾರದು, ಹೀಗೆ ಮೂರು ವರ್ಷ ಚಿಕಿತ್ಸೆ ಪಡೆದಿದ್ದೇ ಆದಲ್ಲಿ ಅಸ್ತಮಾ, ಕೆಮ್ಮು-ದಮ್ಮು ಸೇರಿದಂತೆ ದೇಹದೊಳಗಿನ ಹಲವು ರೋಗಗಳು ಗುಣವಾಗುವುದಲ್ಲದೆ ಜೀವನದಲ್ಲಿ ಮತ್ಯಾವತ್ತೂ ವಾಪಸ್ ಬರೋದಿಲ್ಲವಂತೆ.

ವರ್ಷಕ್ಕೊಮ್ಮೆ ಭಾವಿಕಟ್ಟಿ ಆಸ್ಪತ್ರೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಉಚಿತವಾಗಿ ಕೊಡುವ ಈ ಚಿಕಿತ್ಸೆ ಪಡೆಯಲು ಮಕ್ಕಳು, ಮಹಿಳೆಯರು, ಪುರುಷರು, ವಯಸ್ಸಾದವರು ಸೇರಿದಂತೆ ಎಲ್ಲ ವಯೋಮಾನದ ರೋಗಿಗಳು ಆಗಮಿಸುತ್ತಾರೆ. ಅಲ್ಲದೆ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲ ಧರ್ಮದ ಜನರು ಸಹ ಇಲ್ಲಿಗೆ ಬಂದು ಚಿಕಿತ್ಸೆಯನ್ನು ಪಡೆಯುತ್ತಾರೆ.

ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಆಂದ್ರಪ್ರದೇಶ, ರಾಜಸ್ಥಾನ ಕಡೆಗಳಿಂದಲೂ ಅಧಿಕ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆದು ತಮ್ಮ ಕಾಯಿಲೆ ಗುಣಪಡಿಸಿಕೊಳ್ತಾರೆ. ಇನ್ನು ಚಿಕ್ಕ ಮಕ್ಕಳಿಗೆ ಆಯುರ್ವೇದದಿಂದ ತಯಾರಿಸಿದ ಮಾತ್ರೆಗಳನ್ನು ನುಂಗಿಸಿದರೆ, ದೊಡ್ಡವರಿಗೆ ಮೀನಿನ ಬಾಯಲ್ಲಿ ಔಷಧಿ ಇಟ್ಟು, ಮೀನು ಮರಿಗಳನ್ನು ನುಂಗಿಸುವುದು ಕಡ್ಡಾಯ.

ಕೆಮ್ಮು, ದಮ್ಮು, ಅಸ್ತಮಾ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಯಿಂದ ಆಸ್ಪತ್ರೆಗೆ ವರ್ಷಾನುಗಟ್ಟಲೇ ಅಲೆದಾಡಿದರೂ ವಾಸಿಯಾಗದ ಅದೆಷ್ಟೋ ರೋಗಿಗಳು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ವರ್ಷಕ್ಕೊಮ್ಮೆ ಉಚಿತವಾಗಿ ಸಿಗುವ ಈ ಆಯುರ್ವೇದಿಕ ಫಿಶ್ ಟ್ರೀಟಮೆಂಟ್ ಅನ್ನು ರೋಗಿಗಳು ಪಡೆದು ಗುಣಮುಖರಾಗಬಹುದು ಎನ್ನುತ್ತಾರೆ ಭಾವಿಕಟ್ಟಿ ತಂಡ.




