- Kannada News Photo gallery Even if the summer is over there is a water problem in doddabidarakallu, Chikkabidarakallu for water around, taja suddi
ಬೇಸಿಗೆ ಮುಗಿದ್ರೂ ತಪ್ಪದ ಜಲಬವಣೆ: ದೊಡ್ಡ ಬಿದರಕಲ್ಲು, ಚಿಕ್ಕಬಿದರಕಲ್ಲು ಸುತ್ತ ನೀರಿಗೆ ತತ್ವಾರ
ಯಶವಂತಪುರ ವಿಧಾನಸಭಾಕ್ಷೇತ್ರದ ದೊಡ್ಡ ಬಿದರಕಲ್ಲು, ಚಿಕ್ಕಬಿದರಕಲ್ಲು, ವೇಣುಗೋಪಾಲ ನಗರದಲ್ಲಿ ಬಿರು ಬೇಸಿಗೆ ವೇಳೆ ನೀರಿನ ಬವಣೆಗೆ ತತ್ತರಿಸಿದ್ದ ಈ ಏರಿಯಾ ಜನರಿಗೆ, ಈಗ ಬೇಸಿಗೆ ಮುಗಿದರೂ ನೀರಿನ ಸಮಸ್ಯೆ ಮಾತ್ರ ನಿಂತಿಲ್ಲ. ಹೀಗಾಗಿ ನಮ್ಮ ಏರಿಯಾಗೆ ನೀರು ಬಂದ್ರೆ ಮಾತ್ರ ಬಿಲ್ ಕಟುತ್ತೇವೆ. ಇಲ್ಲಾಂದ್ರೆ ಯಾವ ಬಿಲ್ಲು ಕಟ್ಟಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Updated on: Aug 28, 2024 | 8:05 PM

ಬೆಂಗಳೂರಿನಲ್ಲಿ ಬೇಸಿಗೆ ಮುಗಿದರೂ ಕೂಡ ನೀರಿನ ಸಮಸ್ಯೆ ಮಾತ್ರ ಇನ್ನೂ ಮುಗಿದಿಲ್ಲ. ಒಂದೆಡೆ ಸರ್ಕಾರ ನೀರಿನ ದರ ಏರಿಕೆ ಮಾಡುತ್ತೇವೆ ಅಂದಿದ್ರೆ, ಇತ್ತ ಈ ನಗರದ ಜನ ಮಾತ್ರ ನೀರಿಲ್ಲದೇ ನಿತ್ಯ ಪರದಾಡುತ್ತಿದ್ದಾರೆ. ದಯಮಾಡಿ ನೀರು ಕೊಡಿ ಅಂತಾ ಅಂಗಲಾಚುತ್ತಿದ್ದಾರೆ.

ಯಶವಂತಪುರ ವಿಧಾನಸಭಾಕ್ಷೇತ್ರದ ದೊಡ್ಡ ಬಿದರಕಲ್ಲು, ಚಿಕ್ಕಬಿದರಕಲ್ಲು, ವೇಣುಗೋಪಾಲ ನಗರಗಳಲ್ಲಿ ಹೆಜ್ಜೆ ಇಟ್ಟರೇ ಸಾಕು ಮನೆ ಮನೆ ಮುಂದೆಯೂ ಸಾಲಾಗಿ ಇಟ್ಟಿರುವ ನೀರಿನ ಡ್ರಮ್ಗಳು, ಮನೆಯಿಂದ ಕೂಗಳತೆ ದೂರದ ನಲ್ಲಿಯಲ್ಲಿ ಬರುವ ಅಲ್ಪಸ್ವಲ್ಪ ನೀರು ಹಿಡಿಯಲು ಕಾದು ಕುಳಿತ ಮಹಿಳೆಯರನ್ನು ಕಾಣಬಹುದು.

ಬಿರು ಬೇಸಿಗೆ ವೇಳೆ ನೀರಿನ ಬವಣೆಗೆ ತತ್ತರಿಸಿದ್ದ ಈ ಏರಿಯಾ ಜನರಿಗೆ, ಈಗ ಬೇಸಿಗೆ ಮುಗಿದ್ರೂ ನೀರಿನ ಸಮಸ್ಯೆ ಮಾತ್ರ ನಿಂತಿಲ್ಲ. ಸದ್ಯ ವಾರಕ್ಕೊ, ಹದಿನೈದು ದಿನಕ್ಕೊ ಬರುವ ಅಲ್ಪಸ್ವಲ್ಪ ನೀರಿನಿಂದ ಕಂಗೆಟ್ಟ ಈ ಏರಿಯಾ ಜನ, ಎರಡು ದಿನಕ್ಕೊಮ್ಮೆ ಬರುವ ಜಲಮಂಡಳಿಯ ಉಚಿತ ನೀರಿನ ಟ್ಯಾಂಕರ್ಗಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಟ್ಯಾಂಕರ್ ಬಂದಾಗ ಒಂದು ಮನೆಗೆ ಎರಡು ಡ್ರಮ್ ನೀರು ಕೊಡಲಾಗುತ್ತಿದ್ದು, ಎರಡು ಡ್ರಮ್ ನೀರಲ್ಲೇ ದಿನನಿತ್ಯದ ಎಲ್ಲಾ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನೀರಿಲ್ಲದೇ ನಿತ್ಯ ಸಂಕಷ್ಟ ಅನುಭವಿಸುತ್ತಿರುವ ನಿವಾಸಿಗಳು ನೀರು ಕೊಡಿ ಸ್ವಾಮಿ ಅಂತಾ ಜಲಮಂಡಳಿ ಹಾಗೂ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಈ ಏರಿಯಾಗೆ ಕಾವೇರಿ ನೀರು ಪೂರೈಕೆಗೆ ಅಂತಾ ಪೈಪ್ ಲೈನ್ ಮಾಡಲಾಗಿದೆ. ಆದರೆ 5ನೇ ಹಂತದ ಕಾಮಗಾರಿ ಬಳಿಕವಷ್ಟೇ ನೀರು ಪೂರೈಕೆ ಆಗುವ ಸಾಧ್ಯತೆಯಿದೆ. ನೀರು ಬರುವ ಮೊದಲೇ ಡಿಸಿಎಂ ಡಿ.ಕೆ.ಶಿವಕುಮಾರ್ ನೀರಿನ ದರ ಹೆಚ್ಚಿಸುವ ಸುಳಿವು ಕೊಟ್ಟಿರೋದಕ್ಕೆ ಜನರು ಕಿಡಿಕಾರುತ್ತಿದ್ದಾರೆ. ನಮ್ಮ ಏರಿಯಾಗೆ ನೀರು ಬಂದ್ರೆ ಮಾತ್ರ ಬಿಲ್ ಕಟುತ್ತೇವೆ. ಇಲ್ಲಾಂದ್ರೆ ಯಾವ ಬಿಲ್ಲು ಕಟ್ಟಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಿನ ದರ ಏರಿಕೆ ಬಗ್ಗೆ ಮಾತನಾಡುತ್ತಿರುವ ಸರ್ಕಾರ, ಈ ಏರಿಯಾ ಜನರ ಜಲಬವಣೆ ನೀಗಿಸೋಕೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಸದ್ಯ ನಮ್ಮ ನೀರಿನ ಸಮಸ್ಯೆ ಯಾವಾಗ ಪರಿಹಾರ ಆಗುತ್ತೋ ಅಂತಾ ಜನರು ಕಾದು ಕುಳಿತಿದ್ದಾರೆ.



