- Kannada News Photo gallery Gadag witnesses a special moment: 36 couples tie the knot as per Hindu and Muslim traditions
ಗದಗ ಕೋಮು ಸೌಹಾರ್ದತೆ ಸಂದೇಶ: ಒಟ್ಟೊಟ್ಟಿಗೆ ನೆರವೇರಿತು ಹಿಂದೂ ಮತ್ತು ಮುಸ್ಲಿಮರ ಸಾಮೂಹಿಕ ವಿವಾಹ
ಗದಗದಲ್ಲಿ ನಡೆದ ಅಪರೂಪದ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸದಲ್ಲಿ ಒಟ್ಟು 36 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ. ಬೆಟಗೇರಿ ಅಂಜುಮನ್ ಕಮಿಟಿಯಿಂದ ಆಯೋಜಿಸಲ್ಪಟ್ಟ ಈ ವಿಶೇಷ ಕಾರ್ಯಕ್ರಮ ರಾಜ್ಯಾದ್ಯಂತ ಕೋಮು ಸೌಹಾರ್ದತೆಯ ಸಂದೇಶ ಸಾರಿದೆ. ಪುಟ್ಟರಾಜ್ ಗವಾಯಿಗಳ ಅನುಗ್ರಹದಲ್ಲಿ ನಡೆದ ಈ ಮದುವೆಯು ಬಡವರಿಗೆ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶ ಹೊಂದಿತ್ತು.
Updated on:Sep 10, 2025 | 12:10 PM

ನಾಡಿನೆಲ್ಲೆಡೆ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ. ಜಾತಿ ಜಾತಿಗಳ ಕಲಹ ಶುರುವಾಗಿದೆ. ಆದರೆ ಇತ್ತ ನಡೆದಾಡುವ ದೇವರ ನಾಡಿನಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಬದುಕು ಸಾಗಿಸುತ್ತಿದ್ದಾರೆ. ಲಿಂಗೈಕ್ಯ ಪಂಡಿತ ಪುಟ್ಟರಾಜ್ ಗವಾಯಿಗಳ ನಡೆದಾಡಿದ ನೆಲದಲ್ಲಿ ಹಿಂದೂ-ಮುಸ್ಲಿಂ ಬಾಂಧವರ ಸಾಮೂಹಿಕ ವಿವಾವ ಮಹೋತ್ಸವ ಅದ್ಧೂರಿಯಾಗಿ ನಡೆದದ್ದು, 36 ನವದಂಪತಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಲಿಂಗೈಕ್ಯ ಪಂಡಿತ ಪುಟ್ಟರಾಜ್ ಗವಾಯಿಗಳು ನಡೆದಾಡಿದ ನೆಲ, ಸಂಗೀತ ಬೀಡು ಗದಗ ನಗರ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಅಂಜುಮನ್ ಶಾಲೆ ಆವರಣದಲ್ಲಿ ಹಿಂದೂ, ಮುಸ್ಲಿಂ ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ಬಹಳ ಅದ್ಧೂರಿಯಾಗಿ ನಡೆದಿದೆ.

ಬೆಟಗೇರಿ ಅಂಜುಮನ್ ಕಮಿಟಿ ವತಿಯಿಂದ ಸಾಮೂಹಿಕ ವಿವಾಹ ಮಹೋತ್ಸವ ಆಯೋಜನೆ ಮಾಡಲಾಗಿತ್ತು. ಈ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ 36 ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. 26 ಹಿಂದೂ ಜೋಡಿಗಳು, 10 ಮುಸ್ಲಿಂ ಜೋಡಿಗಳು ಹಸೆಮಣೆ ಏರಿದ್ದಾರೆ. ಆ ಮೂಲಕ ನಾಡಿಗೆ ಕೋಮು ಸೌಹಾರ್ದತೆ ಸಂದೇಶ ಸಾರಿದ್ದಾರೆ.

ಈ ವೇಳೆ ಮಾತನಾಡಿದ ಪುಟ್ಟರಾಜ್ ಗವಾಯಿಗಳ ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಇಂದಿನ ದುಬಾರಿ ಜಗತ್ತಿನಲ್ಲಿ ಮದುವೆಗೆ ಲಕ್ಷಾಂತರ ರೂ ಖರ್ಚು ಮಾಡಲಾಗುತ್ತಿದೆ. ಬಡವರಿಗೆ ಮದುವೆ ಮಾಡುವುದಂದರೆ ಕಷ್ಟದ ಕೆಲಸ. ಆದರೆ ಬೆಟಗೇರಿ ಅಂಜುಮನ್ ಕಮಿಟಿ ಸರ್ವಧರ್ಮಗಳ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಂಡಿದ್ದು ಖುಷಿಯ ವಿಚಾರ ಎಂದಿದ್ದಾರೆ.

ಬೆಟಗೇರಿ ಅಂಜುಮನ್ ಕಮಿಟಿಯಿಂದ ನವ ಜೋಡಿಗಳಿಗೆ ತಾಳಿ, ಕಾಲುಂಗರ, ಬಟ್ಟೆಗಳು ವಿತರಣೆ ಮಾಡಲಾಗಿದೆ. ಕಮಿಟಿ ಅಧ್ಯಕ್ಷ ಪೀರಸಾಬ್ ಕೌತಾಳ ದಂಪತಿ ನವಜೋಡಿಗಳಿಗೆ ತಾಳಿ, ಕಾಲುಂಗರ ನೀಡಿದರು. ಮದುವೆಗೆ ಅಗಮಿಸಿದ 6-7 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

10 ಮುಸ್ಲಿಂ ಜೋಡಿಗಳಿಗೆ ಅವರ ಸಂಪ್ರದಾಯದಂತೆ ಮತ್ತು 26 ಹಿಂದೂ ಜೋಡಿಗಳಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಲಾಗಿದೆ. ಪುಟ್ಟರಾಜ್ ಗವಾಯಿಗಳ ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹಾಗೂ ಮುಸ್ಲಿಂ ಧರ್ಮಗುರುಗಳ ಸಾನಿಧ್ಯದಲ್ಲಿ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸವ ನಡೆಯಿತು.

ಧರ್ಮಗಳ ಮಧ್ಯೆ ನಡೆಯುವ ಗಲಾಟೆ, ಗದ್ದಲಗಳ ಮಧ್ಯೆ ಪುಟ್ಟರಾಜ್ ಗವಾಯಿಗಳು ನಡೆದಾಡಿದ ನೆಲ ಗದಗ ನಗರದಲ್ಲಿ ನಡೆದ ಹಿಂದೂ-ಮುಸ್ಲಿಂ ಸಾಮೂಹಿಕ ವಿವಾಹ ಮಹೋತ್ಸವ ದೇಶದಲ್ಲೆಡೆ ಕೋಮು ಸೌಹಾರ್ದತೆ ಸಂದೇಶ ಸಾರಿದೆ.
Published On - 12:05 pm, Wed, 10 September 25



