ನಾವು ಮಲಗುವುದಕ್ಕಿಂತ ಕನಿಷ್ಟವೆಂದರೂ 2 ಗಂಟೆ ಮೊದಲು ಊಟ ಮಾಡಬೇಕು. ಇದರಿಂದ ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.
ಊಟ ಮಾಡಿ ತಕ್ಷಣ ಮಲಗುವುದರಿಂದ ಆಹಾರ ಜೀರ್ಣವಾಗುವುದು ನಿಧಾನವಾಗುತ್ತದೆ. ಹಾಗೇ, ಇದರಿಂದ ಬೊಜ್ಜು ಹೆಚ್ಚಾಗುತ್ತದೆ. ಆದರೆ, ರಾತ್ರಿ ನೀವು ಯಾವ ರೀತಿಯ ಆಹಾರ ಸೇವಿಸುತ್ತೀರಿ ಎಂಬುದು ನಿಮ್ಮ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ ಎಂಬ ವಿಷಯ ನಿಮಗೆ ಗೊತ್ತಾ?
ನೀವು ಉತ್ತಮವಾಗಿ ನಿದ್ರೆ ಮಾಡಬೇಕೆಂದರೆ ರಾತ್ರಿ 9 ಗಂಟೆಯ ನಂತರ ಈ 6 ಆಹಾರಗಳನ್ನು ಸೇವಿಸುವುದನ್ನು ಬಿಟ್ಟುಬಿಡಿ. ಇದರಿಂದ ನಿಮ್ಮ ನಿದ್ರೆಯಲ್ಲಾಗುವ ಬದಲಾವಣೆ ನಿಮ್ಮ ಗಮನಕ್ಕೇ ಬರುತ್ತದೆ.
ಕೆಲವರು ರಾತ್ರಿ ಕಾಫಿ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಹಲವರು ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುತ್ತಾರೆ.
ರಾತ್ರಿ ನಾನ್ವೆಜ್ ಇಲ್ಲದೆ ಊಟವನ್ನೇ ಮಾಡದವರು ಕೂಡ ಇದ್ದಾರೆ. ಆದರೆ, ಇದೆಲ್ಲ ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ.
ರಾತ್ರಿಯ ಊಟ ಎಷ್ಟು ಸರಳವಾಗಿರುತ್ತದೋ, ಪೌಷ್ಟಿಕಭರಿತವಾಗಿರುತ್ತದೋ ಅಷ್ಟು ಒಳ್ಳೆಯದು.
ಉತ್ತಮ ನಿದ್ರೆಗಾಗಿ ನೀವು ಮಲಗುವ ಮುನ್ನ ತಿನ್ನಬಾರದ ಕೆಲವು ಆಹಾರ ಪದಾರ್ಥಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ.
ಮಾಂಸಾಹಾರಿ ಆಹಾರ: ಕೆಂಪು ಮಾಂಸ ಮತ್ತು ಇತರ ಮಾಂಸಾಹಾರವನ್ನು ತಡರಾತ್ರಿಯಲ್ಲಿ ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ತೊಂದರೆಗೊಳಿಸುತ್ತದೆ. ಇದರಿಂದ ನಿದ್ರಿಸಲು ಕಷ್ಟವಾಗುತ್ತದೆ. ಚಿಕನ್ ಅಥವಾ ಹಂದಿಮಾಂಸವನ್ನು ತಿನ್ನುವುದರಿಂದ ನಿದ್ರೆಯ ತೊಂದರೆಯಾಗುತ್ತದೆ ಮತ್ತು ತೂಕ ಹೆಚ್ಚಾಗುತ್ತದೆ.
ಹಾಲು: ಹಾಲಿನಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂಬ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಮೂಲವಾಗಿರುವ ಹಾಲು ಅದರ ಲ್ಯಾಕ್ಟೋಸ್ ಅಂಶದಿಂದಾಗಿ ನಿದ್ರೆಗೆ ಅಡ್ಡಿಪಡಿಸುತ್ತದೆ.
ಚಾಕೊಲೇಟ್: ಡಾರ್ಕ್ ಚಾಕೊಲೇಟ್ ಉತ್ಕರ್ಷಣ ನಿರೋಧಕಗಳು ಮತ್ತು ಮೆಗ್ನೀಸಿಯಮ್ ಅನ್ನು ಒಳಗೊಂಡಿರುವ ಪೌಷ್ಠಿಕಾಂಶದ ಆಹಾರವಾಗಿದ್ದರೂ, ಇದು ಕೆಫೀನ್ ಅನ್ನು ಒಳಗೊಂಡಿರುತ್ತದೆ. ಇದರಿಂದ ರಾತ್ರಿಯಲ್ಲಿ ನಿದ್ರೆಗೆ ತೊಂದರೆಯಾಗುತ್ತದೆ.
ನಟ್ ಬಟರ್: ನಟ್ ಬಟರ್ ಕೊಬ್ಬಿನ ಉತ್ತಮ ಮೂಲವಾಗಿದ್ದು, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ರಾತ್ರಿಯ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ರಾತ್ರಿ ವೇಳೆ ಆದಷ್ಟೂ ಕಡಿಮೆ ಕೊಬ್ಬಿನ ಊಟವನ್ನು ಸೇವಿಸಿ.
ಅನ್ನ: ರಾತ್ರಿ ಅನ್ನ ಊಟ ಮಾಡುವುದರಿಂದ ತೂಕ ಹೆಚ್ಚಾಗುತ್ತದೆ. ಅನ್ನ ತಿನ್ನುವುದರಿಂದ ದೇಹವು ಹೆಚ್ಚು ಕೊಬ್ಬನ್ನು ಸಂಗ್ರಹಿಸುತ್ತದೆ.
ಖಾರ ಮತ್ತು ಮಸಾಲೆಯುಕ್ತ ಆಹಾರ: ಆಹಾರದಲ್ಲಿ ಬಳಸುವ ಮೆಣಸಿನಕಾಯಿಗಳು ಆರೋಗ್ಯಕರವಾಗಿದ್ದರೂ, ಅವುಗಳ ಜೊತೆಗಿರುವ ಮಸಾಲೆ ಎದೆಯುರಿ ಮತ್ತು ನಿದ್ರೆಗೆ ಅಡ್ಡಿಯಾಗಬಹುದು ಎಂದು ನಿಮಗೆ ತಿಳಿದಿದೆಯೇ? ಅತ್ಯುತ್ತಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ರಾತ್ರಿಯಲ್ಲಿ ಮಸಾಲೆಯ ಆಹಾರದಿಂದ ದೂರವಿರಿ.
Published On - 8:34 pm, Thu, 12 October 23