57 ನಿಮಿಷಗಳು, 0 ಪಾಯಿಂಟ್ಸ್: ಇಗಾ ಶ್ವಿಯಾಂಟೆಕ್ಗೆ ಚಾಂಪಿಯನ್ ಕಿರೀಟ
Wimbledon 2025 Womens final: ಲಂಡನ್ನಲ್ಲಿ ನಡೆದ ವಿಂಬಲ್ಡನ್ ಮಹಿಳಾ ಫೈನಲ್ ಪಂದ್ಯದಲ್ಲಿ ಅಮೆರಿಕನ್ ಟೆನಿಸ್ ತಾರೆ ಅಮಂಡಾ ಅನಿಸಿಮೊವಾ ಅವರನ್ನು ನೇರ ಸೆಟ್ಗಳಿಂದ ಮಣಿಸಿ ಪೋಲೆಂಡ್ ಟೆನಿಸ್ ಚತುರೆ ಇಗಾ ಶ್ವಿಯಾಂಟೆಕ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಅದು ಕೂಡ 37 ವರ್ಷಗಳ ಹಿಂದೆ ಸ್ಟೆಫಿ ಗ್ರಾಫ್ ಬರೆದ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.
Updated on:Jul 13, 2025 | 11:24 AM

ಲಂಡನ್ನ ಚರ್ಚ್ ರೋಡ್ನಲ್ಲಿರುವ ಸೆಂಟರ್ ಕೋರ್ಟ್ನಲ್ಲಿ ವಿಂಬಲ್ಡನ್ ಮಹಿಳಾ ಫೈನಲ್. ಫೈನಲ್ ಪಂದ್ಯದಲ್ಲಿ ಪೋಲೆಂಡ್ನ ಇಗಾ ಶ್ವಿಯಾಂಟೆಕ್ (Iga Świątek) ಹಾಗೂ ಅಮೆರಿಕದ ಅಮಂಡಾ ಅನಿಸಿಮೊವಾ (Amanda Anisimova) ಮುಖಾಮುಖಿ. ವಿಶ್ವ ಟೆಸ್ಟ್ ಶ್ರೇಯಾಂಕದ 8ನೇ ಮತ್ತು 13 ಶ್ರೇಯಾಂಕ ಆಟಗಾರ್ತಿಯರ ಮುಖಾಮುಖಿಯಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು.

ಆದರೆ ಈ ಪೈಪೋಟಿಯು ಕೇವಲ 57 ನಿಮಿಷಗಳಿಗೆ ಮಾತ್ರ ಸೀಮಿತವಾಯಿತು. ಅಂದರೆ ಒಂದು ಗಂಟೆಯೊಳಗೆ ಎದುರಾಳಿಯನ್ನು ಮಕಾಡೆ ಮಲಗಿಸಿ ಇಗಾ ಶ್ವಿಯಾಂಟೆಕ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು. ಅದು ಕೂಡ ಐತಿಹಾಸಿಕ ವಿಜಯದೊಂದಿಗೆ ಎಂಬುದು ಇಲ್ಲಿ ಮತ್ತೊಂದು ವಿಶೇಷ.

ಅಂದರೆ ವಿಂಬಲ್ಡನ್ ಇತಿಹಾಸದಲ್ಲಿ 1911ರ ಬಳಿಕ ಮಹಿಳಾ ಫೈನಲ್ ಪಂದ್ಯದಲ್ಲಿ ಎದುರಾಳಿ ಆಟಗಾರ್ತಿ ಮೊದಲ ಪಾಯಿಂಟ್ಸ್ ಕಲೆಹಾಕುವ ಮುನ್ನವೇ ಎರಡು ಸೆಟ್ಗಳನ್ನು ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಲೆಜೆಂಡ್ ಸ್ಟೆಫಿ ಗ್ರಾಫ್ ಮಾತ್ರ. 1988 ರ ವಿಂಬಲ್ಡನ್ ಫೈನಲ್ನಲ್ಲಿ ನತಾಶ ಜ್ವರೇವಾ ಅವರನ್ನು 0-6,0-6 ಸೆಟ್ಗಳಿಂದ ಮಣಿಸಿ ಸ್ಟೆಫಿ ಗ್ರಾಫ್ ಹೊಸ ಇತಿಹಾಸ ಬರೆದಿದ್ದರು.

ಇದೀಗ ಈ ಇತಿಹಾಸವನ್ನು ಪುನರಾವರ್ತಿಸುವಲ್ಲಿ ಇಗಾ ಶ್ವಿಯಾಂಟೆಕ್ ಯಶಸ್ವಿಯಾಗಿದ್ದಾರೆ. 57 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಅಮಂಡಾ ಅನಿಸಿಮೊವಾ ಮೊದಲ ಪಾಯಿಂಟ್ಸ್ ಕಲೆಹಾಕುವ ಮುನ್ನವೇ ಇಗಾ ಶ್ವಿಯಾಂಟೆಕ್ 0-6, 0-6 ನೇರ ಸೆಟ್ಗಳಿಂದ ಪಂದ್ಯವನ್ನು ಗೆದ್ದಿದ್ದಾರೆ. ಈ ಮೂಲಕ ಚೊಚ್ಚಲ ಬಾರಿ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಸೆರೆನಾ ವಿಲಿಯಮ್ಸ್ ನಂತರ ಕ್ಲೇ, ಹಾರ್ಡ್ ಮತ್ತು ಗ್ರಾಸ್ ಕೋರ್ಟ್‌ಗಳಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೂ ಇಗಾ ಶ್ವಿಯಾಂಟೆಕ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಇಗಾ ನಾಲ್ಕು ಬಾರಿ ಫ್ರೆಂಚ್ ಓಪನ್ ಮತ್ತು ಒಂದು ಬಾರಿ ಯುಎಸ್ ಓಪನ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ತನ್ನ ಬಹುಕಾಲದ ಕನಸಾಗಿದ್ದ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವಲ್ಲಿ ಇಗಾ ಶ್ವಿಯಾಂಟೆಕ್ ಯಶಸ್ವಿಯಾಗಿದ್ದಾರೆ.
Published On - 10:55 am, Sun, 13 July 25
