ದುರ್ಗದ ಕೆಎಸ್ಆರ್​ಟಿಸಿ ಚಾಲಕ ನಟರಾಜ್​ ‘ಕನ್ನಡ ರಥ’ ನಿಮಗೂ ಇಷ್ಟವಾದೀತು.. ಬನ್ನೀ ಒಂದ್​ ರೌಂಡ್

ಸರ್ಕಾರಿ ಬಸ್ಸಿನಲ್ಲಿ ಸಂಚಾರ ಮಾಡೋದು ಬೋರೋ ಬೋರು ಎನ್ನುವವರಿಗೂ ಈ ಬಸ್ ಖಂಡಿತ ಇಷ್ಟವಾಗುತ್ತದೆ. ಅರೆಬರೆ ಇಂಗ್ಲಿಷ್ ಮಾತಾಡುವ ಶೋಕಿವಾಲಾಗಳ ಮನದಲ್ಲೂ ಈ ಬಸ್​ ಕನ್ನಡದ ಕಿಚ್ಚು ಹೊತ್ತಿಸುತ್ತದೆ. ಆ ಬಸ್ ಏರಿದರೆ ಸಾಕು ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸದತ್ತ ಕಣ್ಮನ ತೆರೆದುಕೊಳ್ಳುತ್ತದೆ. ಕೋಟೆನಾಡು ಚಿತ್ರದುರ್ಗದಲ್ಲಿ ಕೆಎಸ್​ಆರ್​ಟಿಸಿ ಚಾಲಕ ನಟರಾಜ್ ಅವರ ಕನ್ನಡ ಪ್ರೇಮದ ಫಲವಾದ ಕನ್ನಡ ರಥದಿಂದ ಕರುನಾಡ ಜನರ ಮನಸೂರೆಗೊಂಡಿದೆ. ವೃತ್ತಿಸಹಜವಾಗಿ ಬಸ್ಸಿನಲ್ಲೇ ಕನ್ನಡದ ದೀಪ ಬೆಳಗುತ್ತಿರುವ ನಟರಾಜ್ ಸಾರಿಗೆ ಬಸ್ಸಿನಲ್ಲಿ ಕನ್ನಡಕ್ಕೆ ಅಪಾರ […]

ದುರ್ಗದ ಕೆಎಸ್ಆರ್​ಟಿಸಿ ಚಾಲಕ ನಟರಾಜ್​ ‘ಕನ್ನಡ ರಥ’ ನಿಮಗೂ ಇಷ್ಟವಾದೀತು.. ಬನ್ನೀ ಒಂದ್​ ರೌಂಡ್
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Nov 23, 2020 | 1:09 PM

ಸರ್ಕಾರಿ ಬಸ್ಸಿನಲ್ಲಿ ಸಂಚಾರ ಮಾಡೋದು ಬೋರೋ ಬೋರು ಎನ್ನುವವರಿಗೂ ಈ ಬಸ್ ಖಂಡಿತ ಇಷ್ಟವಾಗುತ್ತದೆ. ಅರೆಬರೆ ಇಂಗ್ಲಿಷ್ ಮಾತಾಡುವ ಶೋಕಿವಾಲಾಗಳ ಮನದಲ್ಲೂ ಈ ಬಸ್​ ಕನ್ನಡದ ಕಿಚ್ಚು ಹೊತ್ತಿಸುತ್ತದೆ. ಆ ಬಸ್ ಏರಿದರೆ ಸಾಕು ಕನ್ನಡ ಸಾಹಿತ್ಯ, ಸಂಸ್ಕೃತಿ, ಇತಿಹಾಸದತ್ತ ಕಣ್ಮನ ತೆರೆದುಕೊಳ್ಳುತ್ತದೆ. ಕೋಟೆನಾಡು ಚಿತ್ರದುರ್ಗದಲ್ಲಿ ಕೆಎಸ್​ಆರ್​ಟಿಸಿ ಚಾಲಕ ನಟರಾಜ್ ಅವರ ಕನ್ನಡ ಪ್ರೇಮದ ಫಲವಾದ ಕನ್ನಡ ರಥದಿಂದ ಕರುನಾಡ ಜನರ ಮನಸೂರೆಗೊಂಡಿದೆ.

ವೃತ್ತಿಸಹಜವಾಗಿ ಬಸ್ಸಿನಲ್ಲೇ ಕನ್ನಡದ ದೀಪ ಬೆಳಗುತ್ತಿರುವ ನಟರಾಜ್ ಸಾರಿಗೆ ಬಸ್ಸಿನಲ್ಲಿ ಕನ್ನಡಕ್ಕೆ ಅಪಾರ ಕೊಡುಗೆ ನೀಡಿರುವ ಶ್ರೇಷ್ಠ ವ್ಯಕ್ತಿಗಳ ಚಿತ್ರಗಳು ರಾರಾಜಿಸುತ್ತವೆ. ಕವಿಗಳು, ಸಾಹಿತಿಗಳು, ಹೋರಾಟಗಾರರು, ಇತಿಹಾಸ ಪುರುಷರು, ದಾರ್ಶನಿಕರ ಭಾವಚಿತ್ರಗಳು. ಪ್ರೇರಣೆ ನೀಡುವ ಕನ್ನಡ ನುಡಿಗಳ ಸಾಲು ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಕುವೆಂಪು, ಬೇಂದ್ರೆ, ಕಾರಂತ, ತ.ರಾ.ಸು, ಮಾಸ್ತಿ, ಭೈರಪ್ಪ, ಬಿ.ಎಲ್.ವೇಣು ಮತ್ತಿತ್ತರ ಮೇರು ಸಾಹಿತಿಗಳ ಸುಮಾರು 300 ಕೃತಿಗಳಿರುವ ಗ್ರಂಥಾಲಯವೂ ಇದೆ ಈ ಕನ್ನಡ ರಥದಲ್ಲಿ. ವಿವಿಧ ದಿನಪತ್ರಿಕೆಗಳನ್ನೂ ಸಂಗ್ರಹಿಸಿಡುತ್ತಾರೆ. ನಿತ್ಯವೂ ಅನೇಕ‌ ಕನ್ನಡ ಪ್ರೇಮಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಬಸ್​ನಲ್ಲಿ ಸಂಚರಿಸುತ್ತಲೇ ಅನೇಕ ಪುಸ್ತಕಗಳನ್ನು ಅಧ್ಯಯನ ಮಾಡುತ್ತಾರೆ.

ನಟರಾಜ್ ಅವರ ಕನ್ನಡ ಪ್ರೇಮದಿಂದಾಗಿ ಚಿತ್ರದುರ್ಗ-ಬೆಂಗಳೂರು, ಬೆಂಗಳೂರು-ದಾವಣಗೆರೆ ಬಸ್​ನಲ್ಲಿ ಅಪರೂಪದ ಸಂಚಾರಿ ಗ್ರಂಥಾಲಯವೇ ಅನಾವರಣಗೊಂಡಿದೆ. ಅಂತೆಯೇ, ಬಸ್​ನಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಕಹಾನಿ ಹೇಳುವ ಅಪರೂಪದ ಚಿತ್ರಗಳಿವೆ. ಈ ಸಾರಿಗೆ ಬಸ್​ನಲ್ಲಿ ಪ್ರಯಾಣಿಸುವವರಿಗೆ ದೇಶ-ಭಾಷೆ ಪ್ರೇಮ ಜಾಗೃತಗೊಳ್ಳುವುದಂತೂ ಗ್ಯಾರಂಟಿ. ಆ ಮೂಲಕ ಪ್ರತಿದಿನ ಸಾರ್ಥಕ ರಾಜ್ಯೋತ್ಯವ, ಪ್ರತಿಕ್ಷಣ ಸ್ವಾತಂತ್ರ್ಯೋತ್ಸವ ಆಗಬೇಕೆಂಬುದು ಚಾಲಕ ನಟರಾಜ್ ಅವರ ಆಶಯ.

10 ವರ್ಷಗಳಿಂದ ಕರುನಾಡ ಕನ್ನಡ ರಥ ಸೇವೆ ಅಭಾದಿತ ಕಳೆದ ಒಂದು ದಶಕದಿಂದ ತಾವು ಚಾಲಕರಾಗಿರುವ ಎಲ್ಲಾ ಬಸ್ಸುಗಳಲ್ಲೂ ನಟರಾಜ್ ಒಂದಲ್ಲಾ ಒಂದು ವಿಶೇಷಗಳನ್ನು ಅಳವಡಿಸುತ್ತ ಸಾಗಿದ್ದಾರೆ. ರಾಜ್ಯೋತ್ಸವ ಸಂದರ್ಭದಲ್ಲಂತೂ ಇಡೀ ಬಸ್ ಕನ್ನಡದ ಕಂಪು ಸೂಸುತ್ತದೆ. ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರನಾಯಕರ ಭಾವಚಿತ್ರವನ್ನು ಪ್ರದರ್ಶಿಸಿ ದೇಶ ಪ್ರೇಮ ಸಾರುತ್ತಾರೆ. ಚಿತ್ರದುರ್ಗದ ಮದಕರಿ ನಾಯಕ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರ ಚಿತ್ರಗಳು ಮನ ಸೆಳೆಯುತ್ತವೆ.

ನಿತ್ಯ 10 ಸಾವಿರ ರೂಪಾಯಿ ಹಣ ಸಂಗ್ರಹವಾದರೆ ಇಲಾಖೆಯಿಂದ ನಮಗೆ ಇನ್ಸೆಂಟಿವ್ ಆಗಿ ನೂರು ರೂಪಾಯಿ ಕೊಡಲಾಗುತ್ತದೆ. ಅದೇ ಹಣದಲ್ಲಿ ಕನ್ನಡ ಸೇವೆ ಮಾಡುತ್ತಿದ್ದೇನೆ. ಬಸ್ ಏರಿದವರು ಪುಸ್ತಕಗಳ ಮೇಲೆ ಕಣ್ಣಾಡಿಸಿ ಕನ್ನಡ ಪ್ರೀತಿ ವ್ಯಕ್ತಪಡಿಸಿದರೆ ಸಾಕು ನಮ್ಮ ಶ್ರಮ ಸಾರ್ಥಕವಾದಂತೆಯೇ. -ಕನ್ನಡ ರಥ ಚಾಲಕ ನಟರಾಜ್

ತಮ್ಮ ಕರ್ತವ್ಯದ ಜೊತೆಗೆ ವಿಶೇಷ ಕನ್ನಡ ಪ್ರೀತಿಯ ಮೂಲಕ ಚಾಲಕ ನಟರಾಜ್ ನಾಡಿನ ಜನರ ಗಮನ ಸೆಳೆದಿದ್ದಾರೆ. ಕೆಎಸ್​ಆರ್​ಟಿಸಿ ಬಸ್ ಏರಿದರೆ ಜ್ಞಾನ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪರಿಣಾಮ ಅನೇಕ ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು ಚಾಲಕ ನಟರಾಜ್​ಗೆ ಗೌರವ ಸನ್ಮಾನಗಳನ್ನು ನೀಡಿ ಗೌರವಿಸಿವೆ. -ಬಸವರಾಜ ಮುದನೂರ್, ಚಿತ್ರದುರ್ಗ

Published On - 9:41 pm, Sat, 31 October 20