ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರು ಇಂದು (ಫೆಬ್ರವರಿ 14) ನಿಧನ ಹೊಂದಿದ್ದಾರೆ. ರಂಗಭೂಮಿ, ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ ಅನುಭವ ಅವರಿಗಿದೆ. ಅವರನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ತೀವ್ರ ನೋವು ತಂದಿದೆ. ಅವರ ಸಾವಿಗೆ ಸ್ಯಾಂಡಲ್‌ವುಡ್‌ನ ಸಾಕಷ್ಟು ಮಂದಿ ಸಂತಾಪ ಸೂಚಿಸುತ್ತಿದ್ದಾರೆ.
ಅನೇಕ ಧಾರಾವಾಹಿಗಳಲ್ಲಿ (Serial) ನಟಿಸಿದ ಅನುಭವ ಅವರಿಗೆ ಇದೆ. ಹಿರಿತೆರೆಯಲ್ಲೂ ಅವರು ತುಂಬಾನೇ ಹೆಸರು ಮಾಡಿದ್ದರು. ಭಾರ್ಗವಿ ಅವರು ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಭಾರ್ಗವಿ ಅವರದ್ದು ಕಲಾ ಕುಟುಂಬ. ಸಿನಿಮಾ, ಕಿರುತೆರೆ ಜೊತೆಗೆ ರಂಗಭೂಮಿಯಲ್ಲೂ ಅಪಾರ ಅನುಭವ ಹೊಂದಿದ್ದರು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಅನಾಯಾಸವಾಗಿ ಮಾಡುತ್ತಿದ್ದರು. ಅವರ ನಟನೆಯನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದರು. ಭಾರ್ಗವಿ ಅವರ ಪತಿ ನಾರಾಯಣ್ ಅವರು ಮೇಕಪ್ ಆರ್ಟಿಸ್ಟ್ ಆಗಿದ್ದರು. ಅವರನ್ನು ಮೇಕಪ್ ನಾಣಿ ಎಂದೇ ಕರೆಯಲಾಗುತ್ತಿತ್ತು.
ಭಾರ್ಗವಿ ಅವರ ಪುತ್ರ ಪ್ರಕಾಶ್ ಬೆಳವಾಡಿ ಚಿತ್ರರಂಗದಲ್ಲಿ ಹಾಗೂ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ‘ಏರ್ಲಿಫ್ಟ್’ ಸೇರಿ ಹಲವು ಪರಭಾಷೆ ಚಿತ್ರಗಳಲ್ಲಿ ನಟಿಸಿದ್ದಾರೆ. ಭಾರ್ಗವಿ ಪುತ್ರಿ ಸುಧಾ ಬೆಳವಾಡಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸುಧಾ ಮಗಳು ಸಂಯುಕ್ತಾ ಹೊರನಾಡು ಅವರು ಸ್ಯಾಂಡಲ್ವುಡ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕೆಲವೇ ವಾರಗಳ ಹಿಂದೆ ಅವರ ನಟನೆಯ ‘ಒನ್ ಕಟ್ ಟೂ ಕಟ್’ ಚಿತ್ರ ತೆರೆಗೆ ಬಂದಿತ್ತು.
ಭಾರ್ಗವಿ ಅವರು 1960ರ ಸಮಯದಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ‘ಪ್ರೊ. ಹುಚ್ಚುರಾಯ' ಚಿತ್ರದಲ್ಲಿ ಅವರು ಪೋಷಕ ಪಾತ್ರ ಮಾಡಿದ್ದರು. ಈ ಚಿತ್ರಕ್ಕೆ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಇದಲ್ಲದೆ, ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ. 2012ರಲ್ಲಿ ‘ನಾನು, ಭಾರ್ಗವಿ' ಎಂಬ ಅವರ ಆತ್ಮಕಥನ ಬಿಡುಗಡೆ ಆಗಿತ್ತು. ಇದಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರೋದು ವಿಶೇಷ.
Published On - 9:17 pm, Mon, 14 February 22