- Kannada News Photo gallery Mandya district Melukote Vairamudi Brahmotsavam: A Grand Celebration of Faith
ವೈರಮುಡಿ ಉತ್ಸವ ವೈಭವ: ಚೆಲುವನಾರಾಯಣನ ವಜ್ರ ಕಿರೀಟ ಕಣ್ತುಂಬಿಕೊಂಡ ಭಕ್ತ ಗಣ
ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಸ್ಥಾನದ ವೈರಮುಡಿ ಬ್ರಹ್ಮೋತ್ಸವವು ಅದ್ಧೂರಿಯಾಗಿ ನೆರವೇರಿತು. ರಾಜ್ಯ ಮತ್ತು ನೆರೆ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ, ವಜ್ರಖಚಿತ ವೈರಮುಡಿ ಕಿರೀಟ ಧರಿಸಿದ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಉತ್ಸವದಲ್ಲಿ ವಿವಿಧ ಕಲಾ ಪ್ರದರ್ಶನಗಳು ಮತ್ತು ಭಕ್ತಿಪರಾಕಾಷ್ಠೆ ಕಂಡುಬಂದವು. ಕೇಂದ್ರ ಸಚಿವರು ಮತ್ತು ರಾಜಕೀಯ ಮುಖಂಡರು ಸಹ ಉತ್ಸವದಲ್ಲಿ ಪಾಲ್ಗೊಂಡರು.
Updated on: Apr 08, 2025 | 10:30 PM

ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ನೆರವೇರಿತು. ರಾಜ್ಯವಲ್ಲದೆ ನೆರೆ ರಾಜ್ಯಗಳಿಂದಲೂ ಬಂದಿದ್ದ ಲಕ್ಷಾಂತರ ಭಕ್ತರು ವಜ್ರ ಖಚಿತ ವೈರಮುಡಿ ಕಿರೀಟ ಹಾಗೂ ಆಭರಣ ತೊಟ್ಟು ಕಂಗೊಳಿಸುತ್ತಿದ್ದ ಚೆಲುವನಾರಾಯಣಸ್ವಾಮಿ ಕಣ್ತುಂಬಿಕೊಂಡು ಪುನೀತರಾದರು.

ದಕ್ಷಿಣ ಬದರಿ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವದ ಸಂಭ್ರಮ ಮನೆ ಮಾಡಿತ್ತು. ವಜ್ರ ಖಚಿತ ವೈರಮುಡಿ ಕಿರೀಟ ಹಾಗೂ ಆಭರಣಗಳನ್ನು ಧರಿಸಿ ಶ್ರೀದೇವಿ ಭೂದೇವಿ ಜತೆ ಗರುಡಾರೂಢನಾದ ಚೆಲುವನಾರಾಯಣಸ್ವಾಮಿ ಮೇಲುಕೋಟೆಯ ರಾಜಬೀದಿಯಲ್ಲಿ ಸಾಗುತ್ತಿದ್ದರೇ ಭಗವಂತನನ್ನು ಕಣ್ತುಂಬಿಕೊಂಡ ಭಕ್ತರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು.

ರಾಜ್ಯ ಮಾತ್ರವಲ್ಲದೆ ತಮಿಳುನಾಡು, ಆಂದ್ರಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಗೋವಿಂದ ಗೋವಿಂದ ಎಂದು ಭಗವಂತನ ನಾಮಸ್ಮರಣೆ ಮಾಡುತ್ತ ಭಕ್ತಿ ಪರಾಕಾಷ್ಠೆ ಮೆರೆದು ಪುನೀತರಾದರು.

ಮಂಡ್ಯದ ಜಿಲ್ಲಾ ಖಜಾನೆಯಿಂದ ಹೊರಟ ವೈರಮುಡಿ ಕಿರೀಟ ಹಾಗೂ ಆಭರಣದ ಪೆಟ್ಟಿಗೆ ಸಂಜೆ 5.30ರ ವೇಳೆಗೆ ದೇವಸ್ಥಾನಕ್ಕೆ ಬಂದು ತಲುಪಿತು. ವಿವಿಧ ಕಲಾತಂಡಗಳೊಂದಿಗೆ ಸ್ವಾಗತಿಸಿ ಪಲ್ಲಕ್ಕಿಯ ಮೂಲಕ ದೇವಸ್ಥಾನಕ್ಕೆ ತರಲಾಯ್ತು. ಈ ವೇಳೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಪೂಜೆ ಸಲ್ಲಿಸುವ ಮೂಲಕ ವೈರಮುಡಿ ಕಿರೀಟವನ್ನು ಬರಬಾಡಿಕೊಂಡರು.

ಬಳಿಕ ಚೆಲುವನಾರಾಯಣಸ್ವಾಮಿ ಸನ್ನಿಧಿಯ ನವರಂಗದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್ ಸೇರಿದಂತೆ ಅಧಿಕಾರಿಗಳು ಹಾಗೂ ದೇಗುಲದ ಸ್ಥಾನೀಕರ ಸಮ್ಮುಖದಲ್ಲಿ ವಜ್ರಾಭರಣಗಳನ್ನು ಪರಿಶೀಲನೆ (ಪರ್ಕಾವಣೆ) ಮಾಡಲಾಯ್ತು. ಬಳಿಕ ಚೆಲುವನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ವಜ್ರ ಖಚಿತ ವೈರಮುಡಿ ಕಿರೀಟವನ್ನು ಧಾರಣೆ ಮಾಡಲಾಯಿತು. ರಾತ್ರಿ 8 ಗಂಟೆ 10 ನಿಮಿಷಕ್ಕೆ ಮಹಾ ಮಂಗಳಾರತಿ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಉತ್ಸವ ದೇಗುಲದಿಂದ ಹೊರಬರುತ್ತಿದ್ದಂತೆ ಭಕ್ತರು ಹರ್ಘೋದ್ಘಾರ ಮುಗಿಲುಮುಟ್ಟುವಂತಿತ್ತು. ಸರ್ವಾಲಂಕಾರದೊಂದಿಗೆ ಕಂಗೊಳಿಸುತ್ತಿದ್ದ ಚೆಲುವನಾರಾಯಣಸ್ವಾಮಿ ಉತ್ಸವ ಮೇಲುಕೋಟೆಯ ರಾಜಬೀದಿಗಳಲ್ಲಿ ತೆರಳಿತು.

ಈ ವೇಳೆ ರಸ್ತೆ ಎರಡೂ ಬದಿಗಳಲ್ಲಿ ನಿಂತ ಭಕ್ತರು ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಮಕ್ಕಳಿಗೆ ಪರೀಕ್ಷೆಗಳೆಲ್ಲ ಮುಗಿದು ಬೇಸಿಗೆ ರಜೆ ಆರಂಭವಾಗಿರುವುದರಿಂದ ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಭಕ್ತರು ಪಾಲ್ಗೊಂಡಿದರು. ಮಾಜಿ ಸಚಿವ ಹೆಚ್ ಡಿ ರೇವಣ್ಣ, ಪುತ್ರ ಸೂರಜ್ ಕೂಡ ದರ್ಶನ ಪಡೆದರು.
























