- Kannada News Photo gallery Miracle Cow in Chikkamagaluru: 600 Successful Borewells, Karnataka news in kannada
ವಿಜ್ಞಾನ ಲೋಕಕ್ಕೆ ಅಚ್ಚರಿ: ಈ ಬಸವ ಗಂಜಲ ಹಾಕಿದ ಸ್ಥಳದಲ್ಲಿ ಬೋರ್ವೆಲ್ ಹೊಡೆದ್ರೆ ನೀರು ಪಕ್ಕಾ
ಚಿಕ್ಕಮಗಳೂರಿನ ಶರಣ್ಯ ಎಂಬ ಬಸವ, ತನ್ನ ಅಸಾಮಾನ್ಯ ಸಾಮರ್ಥ್ಯದಿಂದ ರಾಜ್ಯಾದ್ಯಂತ ಖ್ಯಾತಿ ಪಡೆದಿದೆ. ಭೂಮಿಯಲ್ಲಿ ನೀರಿನ ಸ್ಥಳವನ್ನು ಗುರುತಿಸುವ ಅದರ ಸಾಮರ್ಥ್ಯದಿಂದ 600 ಕ್ಕೂ ಹೆಚ್ಚು ಬೋರ್‌ವೆಲ್‌ಗಳು ಯಶಸ್ವಿಯಾಗಿವೆ. ವಿಜ್ಞಾನಿಗಳಿಗೂ ಇದು ಅಚ್ಚರಿಯ ಸಂಗತಿಯಾಗಿದೆ. ಬಂಜರು ಭೂಮಿಯಲ್ಲಿಯೂ ನೀರನ್ನು ಪತ್ತೆ ಹಚ್ಚುವ ಶರಣ್ಯ, ರೈತರ ಆಶಾಕಿರಣವಾಗಿದೆ.
Updated on: Nov 03, 2024 | 3:37 PM

ಕರ್ನಾಟಕದಲ್ಲಿ ವಿಜ್ಞಾನ ಲೋಕಕ್ಕೆ ಅಚ್ಚರಿಯಾಗುವ ಸಾಕಷ್ಟು ವಿಚಾರಗಳಿವೆ. ಅವುಗಳು ವಿಜ್ಞಾನಿಗಳಿಗೆ ಸವಾಲು ಕೂಡ ಆಗಿವೆ. ಇವುಗಳೊಂದಿಗೆ ಇದೀಗ ಚಿಕ್ಕಮಗಳೂರಿನ ಈ ಬಸವಣ್ಣ ಕೂಡ ಸೆರ್ಪಡೆಯಾಗಿದೆ.

ಹೌದು. ಚಿಕ್ಕಮಗಳೂರಿನ ಕಣಿವೆ ದಾಸರಹಳ್ಳಿ ಗ್ರಾಮದ ಶನೇಶ್ವರ ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ಬಂದಿದ್ದ ಬಸವ ಇದೀಗ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಇದಕ್ಕೆ ಕಾರಣ ಶರಣ್ಯ ಹೆಸರಿನ ಈ ಬಸವ ಗುರುತು ಮಾಡಿದ ಸ್ಥಳದಲ್ಲಿ ಗಂಗೆ ಉಕ್ಕಿ ಬರುತ್ತೆ. ಹಾಗಾಗಿ ಶರಣ್ಯಳ ಈ ಪವಾಡಕ್ಕೆ ವಿಜ್ಞಾನ ಲೋಕ ಅಚ್ಚರಿಪಟ್ಟಿದೆ.

ಚಿಕ್ಕಮಗಳೂರು ಸೇರಿದಂತೆ ಹೊರ ರಾಜ್ಯದಲ್ಲೂ ಶರಣ್ಯ ಫೇಮಸ್ ಆಗಿದೆ. ಜಿಯೋಲಾಜಿಕಲ್ ವಿಜ್ಞಾನಿಗಳು ಗುರುತು ಮಾಡಿದ ಸ್ಥಳದಲ್ಲಿ ಬೋರ್ ಕೈಕೊಟ್ಟರೂ ಶರಣ್ಯ ಗುರುತಿಸಿದ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ತಪ್ಪುವುದಿಲ್ಲ ಎನ್ನಲಾಗಿತ್ತಿದೆ. ಹಾಗಾಗಿ ಶರಣ್ಯ ತೋರಿಸುವ ಸ್ಥಳದಲ್ಲಿ ರೈತರು ಬೋರ್ ವೆಲ್ ಕೊರೆಸುತ್ತಿದ್ದಾರೆ.

ಜಮೀನು ಸುತ್ತಿ ನೀರು ಸಿಗುವ ಸ್ಥಳದಲ್ಲಿ ಶರಣ್ಯ ಗಂಜಲ ಹಾಕುತ್ತಾಳೆ. ಗಂಜಲ ಹಾಕಿದ ಸ್ಥಳದಲ್ಲಿ ಪಾಯಿಂಟ್ ಮಾಡಿ ಬೋರ್ ಕೊರೆಸಿದರೆ ನೀರು ಸಿಗುತ್ತೆ. ಮತ್ತೊಂದು ವಿಶೇಷವೆಂದರೆ ತಾನು ಗುರುತು ಮಾಡಿದ ಸ್ಥಳದಲ್ಲಿ ನೀರು ಬರುವವರೆಗೂ ಶರಣ್ಯ ಸ್ಥಳ ಬಿಟ್ಟು ಹೋಗಲ್ಲ. ಬೋರ್ವೆಲ್ನಲ್ಲಿ ನೀರು ಚಿಮ್ಮಿದ ಬಳಿಕವೇ ಆ ಸ್ಥಳದಿಂದ ತೆರಳುತ್ತದೆ.

ಬಂಜರು ಭೂಮಿಯಲ್ಲಿ ಶರಣ್ಯ ಗುರುತು ಮಾಡಿದ ಜಾಗದಲ್ಲಿ ನೀರು ಸಿಕ್ಕಿದೆ. ಈ ಭೂಮಿಯಲ್ಲಿ ನೀರು ಬರಲ್ಲ ಎಂದ ಸ್ಥಳದಲ್ಲೇ ಶರಣ್ಯ ನೀರು ಹರಿಸಿದ್ದಾಳೆ. ಇದುವರೆಗೆ ಶರಣ್ಯ ಗುರುತಿಸಿದ 600 ಬೋರ್‌ವೆಲ್‌ಗಳು ಯಶಸ್ವಿಯಾಗಿವೆ.

ಇನ್ನು ಶರಣ್ಯನನ್ನ ಕರೆದುಕೊಂಡು ಹೋಗಲು ವಿಶೇಷವಾದ ಬಸ್ ಕೂಡ ಇದೆ. ತನಗಾಗಿಯೇ ಭಕ್ತರು ನೀಡಿರುವ ವಿಶೇಷವಾದ ಬಸ್ಸಿನಲ್ಲೇ ಪ್ರಯಾಣ ಮಾಡುತ್ತದೆ.

ಕೊಳವೆಬಾವಿ ಗುರುತಿಸಲು ರಾಜ್ಯದ ಮೂಲೆ ಮೂಲೆಗಳಿಗೆ ರೈತರು ಕರೆದುಕೊಂಡು ಹೋಗುತ್ತಾರೆ. ರೈತರ ಪಾಲಿನ ದೇವರು ಎಂದೇ ಶರಣ್ಯ ಖ್ಯಾತಿ ಪಡೆದಿದೆ. ಕೊಳವೆ ಬಾವಿಗಳು ಕೈ ಕೊಟ್ಟು ಕಂಗಾಲಾಗಿದ್ದ ರೈತರ ಪಾಲಿನ ಆಶಾಕಿರಣವಾಗಿದೆ.



















