ಶ್ರೀಕೃಷ್ಣ ಜನ್ಮಾಷ್ಠಮಿಯಂದು ಹಸುವಿನ ಮೇಲೆ ಆ್ಯಸಿಡ್, ಕಾದ ಎಣ್ಣೆ ಸುರಿದ ಕಿಡಿಗೇಡಿಗಳು
ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ರೆಹಮತ್ ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದು ಕಿಡಿಗೇಡಿಗಳು ಹಸುವಿನ ಹೊಟ್ಟೆ, ಬೆನ್ನು, ಮೂಗಿನ ಮೇಲೆ ಆ್ಯಸಿಡ್ ಮತ್ತು ಕಾದ ಎಣ್ಣೆ ಸುರಿದಿದ್ದಾರೆ. ಹಸು ರೋದಿಸಿದ್ದು, ಮೂಕ ಪ್ರಾಣಿಯ ಆಕ್ರಂದನ ಮುಗಿಲು ಮುಟ್ಟಿದೆ.
Updated on: Sep 02, 2024 | 10:55 AM

ಗೋವುಗಳನ್ನು ದೇವರೆಂದು ಪೂಜೆ ಮಾಡುವ ದೇಶದಲ್ಲಿ ಇದೆಂತಹ ವಿಕೃತಿ. ಯಾರಿಗೂ ತೊಂದರೆ ಕೊಡದೆ, ತನ್ನ ಪಾಡಿಗೆ ತಾನು ರಸ್ತೆಯಲ್ಲಿ ಹೋಗುತ್ತಿದ್ದ ಹಸುವಿನ ಮೇಲೆ ಕಿಡಿಗೇಡಿಗಳು ಆ್ಯಸಿಡ್ ಮತ್ತು ಕಾದ ಎಣ್ಣೆ ಸುರಿದಿದ್ದಾರೆ.

ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ರೆಹಮತ್ ನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದು ಕಿಡಿಗೇಡಿಗಳು ಹಸುವಿನ ಹೊಟ್ಟೆ, ಬೆನ್ನು, ಮೂಗಿನ ಮೇಲೆ ಆ್ಯಸಿಡ್ ಮತ್ತು ಕಾದ ಎಣ್ಣೆ ಸುರಿದಿದ್ದಾರೆ. ಇದರಿಂದ, ಹಸುವಿನ ಮೇಲಿನ ಚರ್ಮ ಸುಲಿದಿದೆ. ರಸ್ತೆ ತುಂಬೆಲ್ಲ ರಕ್ತ ಹರಡಿದೆ. ಹಸು ರೋದಿಸಿದ್ದು, ಮೂಕ ಪ್ರಾಣಿಯ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಬಳಿಕ ಹಸು ಕಾಣೆಯಾಗಿದೆ. ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಸೂಕ್ತ ಕ್ರಮ ಕೈಗೊಳ್ಳಿ ಎಂದು ಭಜರಂಗದಳ ಕಾರ್ಯಕರ್ತರು ಗಲ್ಪೇಟೆ ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಗಾಯಗೊಂಡ ಹಸುವನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಬೀಡಾಡಿ ಹಸುವಿನ ಮೇಲೆ ಆ್ಯಸಿಡ್ ಹಾಗೂ ಕಾದಿರುವ ಎಣ್ಣೆ ಸುರಿದು ಗಾಯಗೊಳಿಸಿ ಕಿಡಿಗೇಡಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಗೊಂಡು ನರಳಾಡುತ್ತಿರುವ ಹಸುಗಳನ್ನು ಕಂಡು ಸ್ಥಳೀಯರು ಮರುಗಿದರು. ಹಸುಗಳನ್ನು ಈ ರೀತಿ ಚಿತ್ರಹಿಂಸೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಸಿಡಿಮದ್ದು ಸ್ಫೋಟಗೊಂಡು ಎರಡು ಹಸುಗಳು ಗಂಭೀರವಾಗಿ ಗಾಯಗೊಂಡಿದ್ದವು. ಕೌದಳ್ಳಿ ಗ್ರಾಮದ ಅಕ್ಕಮ್ಮ ಎಂಬುವರಿಗೆ ಸೇರಿದ ಹಸುಗಳು ಮೇಯಲು ಹುಲ್ಲಿಗೆ ಬಾಯಿ ಹಾಕುತ್ತಿದ್ದಂತೆ ಕಿಡಿಗೇಡಿಗಳು ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡಿತ್ತು.




