
ಮೊದಲ ಬಾರಿ ಶಾಸಕರಾಗಿದ್ದಾಗಲೇ ಸಿಎಂ ಸಿದ್ದರಾಮಯ್ಯ ಬದಲಿ ನಿವೇಶನ ಪಡೆದಿದ್ದರು. ಅದಕ್ಕಾಗಿ ಮನವಿ ಮಾಡಿದ್ದರು ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬದಲಿ ನಿವೇಶನ ನೀಡುವಂತೆ ಮುಡಾಗೆ ಮನವಿ ಪತ್ರ ಸಲ್ಲಿಸಿದ್ದರು ಎಂದು ಹೇಳಲಾದ ವೈರಲ್ ಆಗುತ್ತಿರುವ ಪತ್ರ ಇದಾಗಿದೆ.

ಇಂಥದ್ದೇ ನಿವೇಶನ ಬೇಕೆಂದು ನಾನು ಯಾರಿಗೂ ಕೇಳಿಲ್ಲ ಎನ್ನುವ ಸಿದ್ದರಾಮಯ್ಯನವರು ಇಂಥದ್ದೇ ನಿವೇಶನ ಬೇಕೆಂದು ಲಿಖಿತವಾಗಿ ನೀಡಿರುವ ಮನವಿ ಪತ್ರ ಇದು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ನಾನು ಸಹಿ ಮಾಡಿಯೇ ಇಲ್ಲ ಎನ್ನುವ ಸಿದ್ದರಾಮಯ್ಯನವರ ಸಹಿಯುಳ್ಳ ಪತ್ರವಿದು ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ಜಯನಗರ ತೊಣಚಿಕೊಪ್ಪಲು 2 ನೇ ಹಂತ ಎಂ ಬ್ಲಾಕ್ನಲ್ಲಿ ನಿವೇಶ ಸಂಖ್ಯೆ 9 ರಲ್ಲಿ 50*80 ನಿವೇಶನ ಕೊಟ್ಟಿದ್ದಾರೆ. ಸದರಿ ನಿವೇಶನದ ಬದಲಾಗಿ ಜಯನಗರ ತೊಣಚಿಕೊಪ್ಪಲಿನ ಜಿ ಮತ್ತು ಹೆಚ್ ಬ್ಲಾಕ್ನಲ್ಲಿ ಖಾಲಿ ಇರುವ ನಿವೇಶನ ಸಂಖ್ಯೆ 50*80 ಅಳತೆಯ ನಿವೇಶನ ಸಂಖ್ಯೆ 1245 ನ್ನು ನೀಡುವಂತೆ ಮನವಿ ಸಲ್ಲಿಸಲಾಗಿದೆ. ಇದು ಸಿದ್ದರಾಮಯ್ಯರವರು ಸಲ್ಲಿಸಿದ್ದ ಮನವಿ ಪತ್ರ ಎನ್ನಲಾಗುತ್ತಿದೆ.

ಇಂತಹ ಜಾಗದಲ್ಲಿ ಬದಲಿ ನಿವೇಶನ ಕೊಡಿ ಎಂದು ಕೇಳಿಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಹಲವು ಬಾರಿ ಈ ಬಗ್ಗೆ ಮಾತನಾಡಿದ್ದ ಅವರು, ಅನೇಕ ದಾಖಲೆಗಳನ್ನೂ ಪ್ರದರ್ಶಿಸಿದ್ದರು.

ಮತ್ತೊಂದೆಡೆ, ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿದ್ದು ಸಾಲು ಸಾಲು ಆರೋಪ ಮಾಡಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಬೇಕೇ ಎಂಬ ಬಗ್ಗೆ ಇಂದು ತಮ್ಮ ಆದೇಶ ನೀಡಲಿದ್ದಾರೆ.

ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ಸಿಎಂ ಸಿದ್ದರಾಮಯ್ಯ ಡಿನೋಟಿಫಿಕೇಷನ್ನ ಅಕ್ರಮ ಲಾಭ ಪಡೆದಿದ್ದಾರೆ. ಮಾಲೀಕರೇ ಅಲ್ಲದ ವ್ಯಕ್ತಿಯ ಮೂಲಕ ಆಸ್ತಿ ಪಡೆದು ಕೋಟ್ಯಾಂತರ ರೂಪಾಯಿ ಲಾಭ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.