ಹೊಸ ವರ್ಷದ ಅಂಗವಾಗಿ ಅರಮನೆ ಅಂಗಳದಲ್ಲಿ ಹೂವೇ ಹೂವು; ವೀಕೆಂಡ್ಗೆ ಮೈಸೂರಿಗೆ ಹೋಗೋರು ಈ ಫ್ಲವರ್ ಶೋ ನೋಡಲೇ ಬೇಕು!
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮದಲ್ಲಿ ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. 2026ರ ಸ್ವಾಗತಕ್ಕೆ ಸಿದ್ಧವಾಗಿರುವ ಅರಮನೆ, ಲಕ್ಷಾಂತರ ಹೂಗಳಿಂದ ಕಂಗೊಳಿಸುತ್ತಿದೆ. ಶೃಂಗೇರಿ ಶಾರದಾ ಮಾತೆ ದೇಗುಲದ ಮಾದರಿ, ಕಲಾಕೃತಿಗಳು, ಸೆಲ್ಫಿ ಪಾಯಿಂಟ್, ಸಂಗೀತ ಕಾರ್ಯಕ್ರಮಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ. ಡಿಸೆಂಬರ್ 31ರವರೆಗೆ ಈ ಹೂವಿನ ಲೋಕವನ್ನು ವೀಕ್ಷಿಸಲು ಅವಕಾಶವಿದೆ.
Updated on: Dec 22, 2025 | 10:30 AM

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದ ನಡುವೆ ಸಾಂಸ್ಕೃತಿಕ ನಗರಿ ಮೈಸೂರು ವಿಶೇಷವಾಗಿ ಮಿಂಚುತ್ತಿದೆ. 2025ಕ್ಕೆ ವಿದಾಯ ಹೇಳಿ 2026ನ್ನು ಸ್ವಾಗತಿಸಲು ಮೈಸೂರು ಅರಮನೆ ಹೂವಿನ ಅಲಂಕಾರದಲ್ಲಿ ಕಂಗೊಳಿಸುತ್ತಿದೆ. ಅರಮನೆ ಆವರಣದಲ್ಲಿ ನಡೆಯುತ್ತಿರುವ ಮಾಗಿ ಉತ್ಸವ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಈಶ್ವರನ ಹೂದೋಟದಂತೆ ಹೂವಿನ ಲೋಕ ಧರೆಗಿಳಿದ ಅನುಭವ ನೀಡುತ್ತಿದೆ.

11 ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಚಾಲನೆ ನೀಡಿದ್ದಾರೆ. ಕ್ರಿಸ್‌ಮಸ್ ರಜೆ ಹಾಗೂ ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಡಿಸೆಂಬರ್ 31ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಹೂವಿನ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಈ ಬಾರಿಯ ಫ್ಲವರ್ ಶೋನ ಪ್ರಮುಖ ಆಕರ್ಷಣೆ ಶೃಂಗೇರಿಯ ಶಾರದಾ ಮಾತೆ ದೇಗುಲದ ಮಾದರಿ. 50 ಅಡಿ ಅಗಲ, 16 ಅಡಿ ಉದ್ದ ಮತ್ತು 25 ಅಡಿ ಎತ್ತರದ ಈ ಕಲಾಕೃತಿ ಲಕ್ಷಾಂತರ ಗುಲಾಬಿ ಹಾಗೂ ಸೇವಂತಿಗೆ ಹೂಗಳಿಂದ ನಿರ್ಮಿಸಲಾಗಿದೆ. ದೇಗುಲದ ಭವ್ಯತೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಫಲಪುಷ್ಪ ಪ್ರದರ್ಶನದಲ್ಲಿ 2025ರಲ್ಲಿ ಭಾರತೀಯ ಮಹಿಳಾ ಕ್ರಿಕೆಟಿಗರು ಗೆದ್ದ ಟ್ರೋಫಿಯ ಮಾದರಿ, ಸಾಲುಮರದ ತಿಮ್ಮಕ್ಕ, ಆಪರೇಷನ್ ಸಿಂಧೂರ್ ಹಾಗೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಲಾಕೃತಿಗಳು ವಿಶೇಷ ಆಕರ್ಷಣೆಯಾಗಿವೆ. ಜೊತೆಗೆ ಸೆಲ್ಫಿ ಪ್ರಿಯರಿಗಾಗಿ ವಿಶಿಷ್ಟ ವಿನ್ಯಾಸದ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ.

ಫ್ಲವರ್ ಶೋ ಜೊತೆಗೆ ಡಿಸೆಂಬರ್ 25ರವರೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಮಣಿಕಾಂತ್ ಕದ್ರಿ, ವಾಸುಕಿ ವೈಭವ್, ಅಜಯ್ ವಾರಿಯರ್ ತಂಡಗಳ ಸಂಗೀತ ರಸಸಂಜೆ ಪ್ರೇಕ್ಷಕರ ಮನಸೂರೆಗೊಳ್ಳಲಿದೆ. ಸುಮಾರು 4 ಲಕ್ಷ ಹೂಗಳು ಹಾಗೂ 35 ಸಾವಿರ ಜಾತಿಯ ಗಿಡಗಳಿಂದ ಅರಮನೆ ಆವರಣ ಜಗಮಗಿಸುತ್ತಿದೆ.



