- Kannada News Photo gallery Kannada news | Mysuru Rains latest news updates pre monsoon rain damage and deaths weather forecast
Mysuru News: ಮೈಸೂರಿನಲ್ಲಿ ಮಳೆ ಅವಾಂತರ, ಅಪಾರ ಹಾನಿ; ಚಿತ್ರಗಳು ಇಲ್ಲಿವೆ ನೋಡಿ
ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಹಾಗೂ ರಾತ್ರಿ ಸುರಿದ ಭಾರೀ ಗಾಳಿ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ನಗರ ಹಾಗೂ ಜಿಲ್ಲೆಯ ವಿವಿಧೆಡೆ ಸಾಕಷ್ಟು ಹಾನಿ ಸಂಭವಿಸಿದೆ.
Updated on: May 23, 2023 | 6:09 PM

ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಸಂಜೆ, ರಾತ್ರಿ ಬಿರುಸಿನ ಗಾಳಿ, ಗುಡುಗು, ಮಿಂಚು ಸಹಿತ ಸುರಿದ ಭಾರೀ ಮಳೆಗೆ ಮೂವರು ಬಲಿಯಾಗಿದ್ದಾರೆ. ಸಿಡಿಲು ಬಡಿದು ಇಬ್ಬರು ಮೃತಪಟ್ಟರೆ, ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದಾರೆ.

ಮಳೆ ಜತೆ ಬೀಸಿದ ಗಾಳಿಗೆ ಹಲವು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಎರಡು ಬೃಹತ್ ಮರಗಳು ಬುಡ ಸಮೇತ ಮುಡಾ ಕಚೇರಿ ಮುಂಭಾಗ ಮತ್ತು ನಗರದ ಕಾನೂನು ನ್ಯಾಯಾಲಯಗಳ ಸಂಕೀರ್ಣದ ಬಳಿ ಜೆಎಲ್‌ಬಿ ರಸ್ತೆಗೆ ಅಡ್ಡಲಾಗಿ ಬಿದ್ದಿವೆ.

ರಭಸವಾಗಿ ಬೀಸಿದ ಗಾಳಿಯಿಂದಾಗಿ ಹೆಂಚು ಹಾಕಿದ ಮತ್ತು ಕಲ್ನಾರಿನ ಶೀಟ್ ಮನೆಗಳು ಹೆಚ್ಚು ಹಾನಿಗೊಳಗಾಗಿದ್ದು, ಗಾಳಿಯಿಂದಾಗಿ ಅನೇಕ ಮನೆಗಳ ಹೆಂಚುಗಳು ಮತ್ತು ಶೀಟ್‌ಗಳು ಹಾರಿಹೋಗಿವೆ. ಜಿಲ್ಲೆಯ ಹಲವೆಡೆ ವಿದ್ಯುತ್ ತಂತಿ ತುಂಡಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಮೈಸೂರು ನಗರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಬಿಡುವು ನೀಡಿದ ನಂತರ, ಸಂಜೆ 6 ಗಂಟೆಗೆ ಬಿರುಗಾಳಿ ಸಹಿತ ಮಳೆ ಸುರಿಯಲಾರಂಭಿಸಿತು.

ಚಾಮರಾಜಪುರದ ಜಿಲ್ಲಾ ನ್ಯಾಯಾಲಯದ ಮುಂಭಾಗದಲ್ಲಿ ಬೃಹತ್ ಮರವೊಂದು ನೆಲಕ್ಕುರುಳಿದೆ. ಮರವು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ಕಂಬ ನೆಲಕ್ಕುರುಳಿವೆ.

ಹುಣಸೂರು ರಸ್ತೆಯ ಕಲಾಮಂದಿರ ಬಳಿ, ಜೆಎಲ್‌ಬಿ ರಸ್ತೆ, ಬೋಗಾದಿ 2ನೇ ಹಂತ, ವಿಜಯನಗರ 2ನೇ ಹಂತ, ಆಲನಹಳ್ಳಿ, ಕಲ್ಯಾಣಗಿರಿಯ ತ್ರಿವೇಣಿ ವೃತ್ತ, ವಿದ್ಯಾರಣ್ಯಪುರಂನ ಸೇಂಟ್ ಥಾಮಸ್ ಶಾಲೆ ಬಳಿ, ಸರಸ್ವತಿಪುರಂ 5ನೇ ಮುಖ್ಯರಸ್ತೆಯಲ್ಲಿಯೂ ಮರಗಳು ಉರುಳಿಬಿದ್ದವು.

ದಿಢೀರ್ ರಭಸದ ಗಾಳಿ ಬೀಸಿದ ಪರಿಣಾಮ ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಭೂಮಿಗೂ ಹಾನಿಯಾಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
























