IPL 2023: ಐಪಿಎಲ್ ಸೀಸನ್ 16 ಅನ್ನು ಕಪ್ ಗೆಲ್ಲುವ ನಿರೀಕ್ಷೆಯೊಂದಿಗೆ ಆರಂಭಿಸಿದ್ದ ಆರ್ಸಿಬಿ ತಂಡವು ಲೀಗ್ ಹಂತದಲ್ಲೇ ಹೊರಬಿದ್ದಿದೆ. ಆಡಿದ 14 ಪಂದ್ಯಗಳಲ್ಲಿ 7 ಜಯ ಹಾಗೂ 7 ಸೋಲಿನೊಂದಿಗೆ ಫಾಫ್ ಡುಪ್ಲೆಸಿಸ್ ಪಡೆ ಅಭಿಯಾನ ಅಂತ್ಯಗೊಳಿಸಿತ್ತು.
ಅದರಲ್ಲೂ ಪ್ಲೇಆಫ್ಗೇರಲು ಉತ್ತಮ ಅವಕಾಶವಿತ್ತಾದರೂ ಕೊನೆಯ ಪಂದ್ಯದಲ್ಲಿ ಸೋಲುವ ಮೂಲಕ ನಿರಾಸೆ ಮೂಡಿಸಿತ್ತು. ಇದರೊಂದಿಗೆ ಈ ಸಲ ಕಪ್ ಗೆಲ್ಲಲಿದೆ ಎಂಬ ಆರ್ಸಿಬಿ ಅಭಿಮಾನಿಗಳ ಬಹುದೊಡ್ಡ ಕನಸು ಕೂಡ ಕಮರಿದೆ.
ಈ ಸೋಲಿನ ಹತಾಶೆಯಲ್ಲಿರುವ ಆರ್ಸಿಬಿ ಅಭಿಮಾನಿಗಳಿಗಾಗಿ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಅದು ಕೂಡ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳುವ ಮೂಲಕ ಎಂಬುದು ವಿಶೇಷ.
ಅತ್ಯುತ್ತಮ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಐಪಿಎಲ್ ಸೀಸನ್...ದುರಾದೃಷ್ಟವಶಾತ್, ನಾವು ಗುರಿ ತಲುಪಲು ಸಾಧ್ಯವಾಗಿಲ್ಲ. ನಿರಾಸೆಯಂತು ಆಗಿದೆ, ಆದರೆ ನಾವು ತಲೆ ಎತ್ತಿಕೊಂಡೇ ಓಡಾಡಬೇಕು. ನಮ್ಮ ನಿಷ್ಠಾವಂತ ಬೆಂಬಲಿಗರಿಗೆ, ಪ್ರತಿ ಹಂತದಲ್ಲೂ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಕೃತಜ್ಞರಾಗಿರುತ್ತೇವೆ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ನಿಂದ 2 ಭರ್ಜರಿ ಶತಕಗಳು ಮೂಡಿಬಂದಿರುವುದು ವಿಶೇಷ. ಅಂದರೆ 2019 ರ ಬಳಿಕ ಕಿಂಗ್ ಕೊಹ್ಲಿ ಐಪಿಎಲ್ನಲ್ಲಿ ಶತಕ ಬಾರಿಸಿರಲಿಲ್ಲ. ಆದರೆ ಈ ಸಲ ಎಸ್ಆರ್ಹೆಚ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಕಿಂಗ್ ಕೊಹ್ಲಿ ದಾಖಲೆ ನಿರ್ಮಿಸಿದ್ದರು.
ಹಾಗೆಯೇ 14 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿರಾಟ್ ಕೊಹ್ಲಿ 2 ಭರ್ಜರಿ ಶತಕದೊಂದಿಗೆ ಒಟ್ಟು 639 ರನ್ ಕಲೆಹಾಕಿದ್ದರು. ಅಲ್ಲದೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾಗ್ಯೂ ಆರ್ಸಿಬಿ ತಂಡಕ್ಕೆ ಪ್ಲೇಆಫ್ಸ್ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂಬುದೇ ಬೇಸರದ ಸಂಗತಿ.
Published On - 8:30 pm, Tue, 23 May 23