- Kannada News Photo gallery Paris Olympics 2024 Know The Prize Money Won By Arshad Nadeem After Winning gold Medal
Arshad Nadeem: ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಅರ್ಷದ್ ನದೀಮ್‌ಗೆ ಸಿಕ್ಕ ಬಹುಮಾನ ಎಷ್ಟು ಕೋಟಿ ಗೊತ್ತಾ?
Paris Olympics 2024: ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರಿಗೆ ಪದಕದ ಹೊರತಾಗಿ ಹಣದ ರೂಪದಲ್ಲಿ ಯಾವುದೇ ಬಹುಮಾನವನ್ನು ನೀಡಲಾಗುವುದಿಲ್ಲ. ಆದರೆ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಈ ಬಾರಿಯಿಂದ ಒಲಿಂಪಿಕ್ಸ್ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ಚಿನ್ನದ ಪದಕ ವಿಜೇತರಿಗೆ ಹಣದ ರೂಪದಲ್ಲಿ ಬಹುಮಾನ ನೀಡಲಾಗುವುದು ಎಂದು ವಿಶ್ವ ಅಥ್ಲೀಟಿಕ್ ಸಂಸ್ಥೆ ಘೋಷಿಸಿತ್ತು.
Updated on:Aug 12, 2024 | 6:56 PM

ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್, ಜಾವೆಲಿನ್ ಫೈನಲ್ ಸುತ್ತಿನಲ್ಲಿ ಬರೋಬ್ಬರಿ 92.97 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ಪಾಕಿಸ್ತಾನದ 32 ವರ್ಷಗಳ ಪದಕದ ಬರವನ್ನು ಸಹ ನೀಗಿಸಿದ್ದರು. ಅಲ್ಲದೆ ಒಲಿಂಪಿಕ್ಸ್ ಇತಿಹಾಸದಲ್ಲಿ ಅತೀ ದೂರ ಜಾವೆಲಿನ್ ಎಸೆದ ದಾಖಲೆಯನ್ನೂ ನಿರ್ಮಿಸಿದರು.

ಇದೀಗ ಒಲಿಂಪಿಕ್ಸ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಅರ್ಷದ್ಗೆ ಪಾಕಿಸ್ತಾನದಾದ್ಯಂತ ಬಹುಮಾನಗಳ ಸುರಿಮಳೆಯಾಗುತ್ತಿದೆ. ಪಾಕಿಸ್ತಾನ ಸರ್ಕಾರ ಸೇರಿದಂತೆ ದೇಶದ ಇನ್ನೀತರ ಗಣ್ಯರು ಅರ್ಷದ್ಗೆ ಭಾರೀ ಮೊತ್ತದ ಬಹುಮಾನ ನೀಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಎಲ್ಲಾ ಮೂಲಗಳಿಂದ ಅರ್ಷದ್ಗೆ ಒಟ್ಟಾರೆಯಾಗಿ 4.5 ಕೋಟಿ ರೂ. (ಪಾಕಿಸ್ತಾನ ರೂಪಾಯಿ) ಹಣ ಬಹುಮಾನವಾಗಿ ಸಿಗಲಿದೆ.

ಇದೆಲ್ಲದರ ಹೊರತಾಗಿಯೂ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಮ್‌ಗೆ ವಿಶ್ವ ಅಥ್ಲೀಟಿಕ್ ಸಂಸ್ಥೆಯಿಂದ 50 ಸಾವಿರ ಡಾಲರ್ ಹಣವನ್ನು ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 41.60 ಲಕ್ಷ ರೂಗಳನ್ನು ಬಹುಮಾನ ನೀಡಲಿದೆ.

ವಾಸ್ತವವಾಗಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರಿಗೆ ಪದಕದ ಹೊರತಾಗಿ ಹಣದ ರೂಪದಲ್ಲಿ ಯಾವುದೇ ಬಹುಮಾನವನ್ನು ನೀಡಲಾಗುವುದಿಲ್ಲ. ಆದರೆ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಈ ಬಾರಿಯಿಂದ ಒಲಿಂಪಿಕ್ಸ್ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ಚಿನ್ನದ ಪದಕ ವಿಜೇತರಿಗೆ ಹಣದ ರೂಪದಲ್ಲಿ ಬಹುಮಾನ ನೀಡಲಾಗುವುದು ಎಂದು ವಿಶ್ವ ಅಥ್ಲೀಟಿಕ್ ಸಂಸ್ಥೆ ಘೋಷಿಸಿತ್ತು.

ಅದರಂತೆ ಈ ಬಾರಿ ಚಿನ್ನದ ಪದಕ ಗೆದ್ದ ಅಥ್ಲೀಟ್‌ಗಳಿಗೆ 50 ಸಾವಿರ್ ಡಾಲರ್ಗಳನ್ನು ಬಹುಮಾನವನ್ನಾಗಿ ನೀಡಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದವರಿಗೆ ಮಾತ್ರ ಬಹುಮಾನವನ್ನು ನೀಡಲಾಗಿದ್ದರೆ, 2028 ರಲ್ಲಿ ನಡೆಯಲ್ಲಿರುವ ಲಾಸ್ ಏಂಜಲಿಸ್ ಒಲಿಂಪಿಕ್ಸ್ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ಚಿನ್ನದ ಪದಕದ ಜೊತೆಗೆ ಬೆಳ್ಳಿ ಹಾಗೂ ಕಂಚಿನ ಪದಕ ವಿಜೇತರಿಗೂ ಹಣದ ರೂಪದಲ್ಲಿ ಬಹುಮಾನ ನೀಡಲಾಗುತ್ತದೆ.

ಇನ್ನು ಹಣದ ಜೊತೆಗೆ ಅರ್ಷದ್ ನದೀಮ್‌ಗೆ ಹಲವಾರು ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಲಾಗಿದೆ. ಅದರಂತೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನದೀಮ್‌ಗೆ ನೀಡಬೇಕೆಂದು ಶಿಫಾರಸು ಮಾಡುವ ನಿರ್ಣಯವನ್ನು ರಾಷ್ಟ್ರೀಯ ಅಸೆಂಬ್ಲಿ ಸರ್ವಾನುಮತದಿಂದ ಅಂಗೀಕರಿಸಿದೆ. ಅಲ್ಲದೆ ಸಿಂಧ್ ಸರ್ಕಾರದ ವಕ್ತಾರ ಬ್ಯಾರಿಸ್ಟರ್ ಇಸ್ಲಾಂ ಶೇಖ್ ಅವರು ನದೀಮ್‌ಗೆ ಚಿನ್ನದ ಕಿರೀಟ ನೀಡಲು ತೀರ್ಮಾನಿಸಿದ್ದಾರೆ.
Published On - 6:55 pm, Mon, 12 August 24



















