- Kannada News Photo gallery Paytm Payments Bank Shut Down On March 15th, What Happens For Its Customers, Know Details Here
Paytm Payment Bank: ಮಾರ್ಚ್ 15ಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಂತ್ಯ; ಗ್ರಾಹಕರ ಮೇಲೇನು ಪರಿಣಾಮ, ಇಲ್ಲಿದೆ ಡೀಟೇಲ್ಸ್
ನವದೆಹಲಿ, ಮಾರ್ಚ್ 14: ಆರ್ಬಿಐನಿಂದ ಕಠಿಣ ಕ್ರಮಕ್ಕೆ ತುತ್ತಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ (Paytm Payments Bank) ಬಹುತೇಕ ಚಟುವಟಿಕೆ ಮಾರ್ಚ್ 15ಕ್ಕೆ ಸ್ಥಗಿತಗೊಳ್ಳಲಿದೆ. ಶುಕ್ರವಾರದ ಬಳಿಕ ಪೇಟಿಎಂ ಗ್ರಾಹಕರ ಮೇಲೆ ಆಗುವ ಪರಿಣಾಮಗಳೇನು, ಯಾವ್ಯಾವೆಲ್ಲಾ ಚಟುವಟಿಕೆಗಳಿಗೆ ಅವಕಾಶ ಇದೆ, ಪೇಟಿಎಂನ ಬೇರೆ ವ್ಯವಹಾರಗಳಿಗೆ ಇದರ ಪರಿಣಾಮ ಏನು ಎಂಬಿತ್ಯಾದಿ ವಿವರ ಇಲ್ಲಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್ಬಿಐನಿಂದ ಕ್ರಮ ಎದುರಿಸುತ್ತಿರುವುದು ಯಾಕೆ ಎನ್ನುವ ವಿವರವೂ ಇಲ್ಲಿದೆ...
Updated on: Mar 14, 2024 | 11:40 AM

ಭಾರತೀಯ ರಿಸರ್ವ್ ಬ್ಯಾಂಕ್ 2023ರ ಜನವರಿ 31ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿತು. ಅದರಂತೆ ಮಾರ್ಚ್ 15ರ ಬಳಿಕ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಠೇವಣಿ ಪಡೆಯುವಂತಿಲ್ಲ ಎಂಬುದು ಒಂದು ಮುಖ್ಯ ನಿರ್ಬಂಧ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸರಿಯಾದ ದಾಖಲೆಗಳಿಲ್ಲದೇ ಹಲವು ಖಾತೆಗಳನ್ನು ತೆರೆಯಲು ಅವಕಾಶ ಕೊಟ್ಟಿತ್ತು. ಇದರಿಂದ ಅಕ್ರಮ ಹಣ ವಹಿವಾಟು ನಡೆಯುವ ಅಪಾಯ ಇರುತ್ತದೆ. ಈ ಬಗ್ಗೆ ಆರ್ಬಿಐ ಬಾರಿ ಬಾರಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಎಚ್ಚರಿಸುತ್ತಲೇ ಬಂದಿತ್ತು. ಆದರೂ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ಅಂತಿಮವಾಗಿ ಬ್ಯಾಂಕ್ ಅನ್ನು ನಿರ್ಬಂಧಿಸುವುದು ಆರ್ಬಿಐಗೆ ಅನಿವಾರ್ಯವಾಗಿತ್ತೆನ್ನಲಾಗಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್ಬಿಐನ ಪರವಾನಿಗೆ ಪಡೆದ ಬ್ಯಾಂಕ್ ಆದ್ದರಿಂದ ಅದರ ನಿಯಮ, ನಿಬಂಧನೆಗಳಿಗೆ ಒಳಪಡಬೇಕಾಗುತ್ತದೆ. ಆದರೆ, ಹಲವು ನಿಯಮಗಳನ್ನು ಪೇಮೆಂಟ್ಸ್ ಬ್ಯಾಂಕ್ ಗಾಳಿಗೆ ತೂರಿದೆ.

ಬ್ಯಾಂಕಿಂಗ್ ಲೈಸೆನ್ಸ್ ಪಡೆದ ಸಂಸ್ಥೆ ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಆದರೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಹೆಚ್ಚಿನ ವ್ಯವಹಾರ ಪೇಟಿಎಂಗೆ ಸೀಮಿತವಾಗಿದೆ. ಎರಡಕ್ಕೂ ಒಬ್ಬರೇ ಮುಖ್ಯಸ್ಥರಾಗಿದ್ದಾರೆ. ಇದು ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್ಬಿಐ ಕಣ್ಣು ಬೀಳಲು ಮತ್ತೊಂದು ಕಾರಣವಾಯಿತು.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಹಲವು ಖಾತೆಗಳಿಗೆ ಕೆವೈಸಿ ದಾಖಲೆಗಳನ್ನು ಪಡೆಯಲಾಗಿಲ್ಲ. ಹಲವು ಖಾತೆಗಳಿಗೆ ಅಸಮರ್ಪಕ ದಾಖಲೆಗಳಿವೆ. ಒಂದು ಕೆವೈಸಿ ದಾಖಲೆಯನ್ನೇ ಒಂದಕ್ಕಿಂತ ಹೆಚ್ಚು ಖಾತೆಗಳಿಗೆ ಉಪಯೋಗಿಸಲಾಗಿದೆ. ಬಹಳ ಹೆಚ್ಚಿನ ಸಂಖ್ಯೆಯ ಖಾತೆಗಳು ಸ್ಥಗಿತಗೊಂಡಿವೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಖಾತೆಗಳು ಮತ್ತಿತರ ಅಂಶಗಳನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ. ಹೀಗಾಗಿ, ಮಾರ್ಚ್ 15ರೊಳಗೆ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ.

ಮಾರ್ಚ್ 15ರ ಬಳಿಕ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವವರು ಹಣ ಡೆಪಾಸಿಟ್ ಮಾಡಲಾಗುವುದಿಲ್ಲ. ಪೇಟಿಎಂ ಫಾಸ್ಟ್ಯಾಗ್ಗೆ ರೀಚಾರ್ಜ್ ಮಾಡಲಾಗುವುದಿಲ್ಲ. ಪೇಟಿಎಂ ವ್ಯಾಲಟ್ಗೂ ಹಣ ಹಾಕಲು ಸಾಧ್ಯವಾಗುವುದಿಲ್ಲ.

ಆದರೆ, ಈಗಾಗಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಖಾತೆಯಲ್ಲಿ ಹಣ ಇದ್ದರೆ ಅದನ್ನು ಬಳಸಬಹುದು. ಪೇಟಿಎಂ ವ್ಯಾಲಟ್ ಮತ್ತು ಫಾಸ್ಟ್ಯಾಗ್ನಲ್ಲಿ ಹಣ ಇದ್ದರೆ ಅದನ್ನೂ ಬಳಕೆ ಮಾಡಬಹುದು. ಆ ಹಣ ಎಲ್ಲಿಯೂ ಹೋಗುವುದಿಲ್ಲ.




