Updated on: Jul 24, 2022 | 4:03 PM
ಪರ್ಸೋನಾ ಮಿಸಸ್ ಇಂಡಿಯಾ ಸ್ಪರ್ಧೆ ಇತ್ತೀಚೆಗೆ ನಡೆಯಿತು. ಬೆಂಗಳೂರಿನ ಸುಂದರಿ ಹೇಮಾ ನಿರಂಜನ್ ಅವರು ಈ ಸ್ಪರ್ಧೆಯಲ್ಲಿ ಜಯಶೀಲರಾಗಿ ‘ಪರ್ಸೋನಾ ಮಿಸಸ್ ಇಂಡಿಯಾ’ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಖುಷಿಯಲ್ಲಿ ಹೇಮಾ ಅವರು ಸುದ್ದಿಗೋಷ್ಠಿ ಆಯೋಜಿಸಿದ್ದರು.
ಹೇಮಾ ನಿರಂಜನ್ ಅವರು ಹೊಳೆನರಸೀಪುರದ ಮೂಲದವರು. ‘ತುಂಬಾ ಸಂಪ್ರದಾಯಸ್ಥ ಕುಟುಂಬ ನಮ್ಮದು. ತಂದೆ ಶಿಕ್ಷಕರು. ನಾನು ಸಹ ಟೀಚರ್ಸ್ ಟ್ರೈನಿಂಗ್ ಮಾಡಿದ್ದೀನಿ. ನಿರಂಜನ್ ಅವರು ನನ್ನ ಪತಿ. ಮದುವೆಯಾದ ನಂತರ ಬೆಂಗಳೂರಿನಲ್ಲೇ ಇದ್ದೀನಿ’ ಎಂದು ತಮ್ಮ ಹಿನ್ನೆಲೆ ಬಗ್ಗೆ ಹೇಳಿಕೊಂಡರು ಹೇಮಾ.
‘ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ನನ್ನ ಬಾಲ್ಯದ ಕನಸಾಗಿತ್ತು. ನಮ್ಮ ತಂದೆ-ತಾಯಿಗೆ ಇದೆಲ್ಲಾ ಇಷ್ಟವಿರಲಿಲ್ಲ. ಆದರೆ ನನ್ನ ಪತಿ ನನ್ನ ಕನಸಿಗೆ ಆಸರೆಯಾದರು. ಅವರ ಸಹಕಾರದಿಂದ ಇದೆಲ್ಲಾ ಸಾಧ್ಯವಾಯಿತು’ ಎಂದು ಕುಟುಂಬದ ಸಹಕಾರವನ್ನು ಹೇಮಾ ಸ್ಮರಿಸಿದ್ದಾರೆ.
‘ಈ ಸ್ಪರ್ಧೆಯಲ್ಲಿ ಗೆಲ್ಲಲು ಬರೀ ಸೌಂದರ್ಯ ಮಾತ್ರವೇ ಮಾನದಂಡವಲ್ಲ. ತುಂಡು ಬಟ್ಟೆಗಳನ್ನು ಧರಿಸುವುದೂ ಅಲ್ಲ. ಸಾಕಷ್ಟು ಪೂರ್ವ ತಯಾರಿ ಬೇಕು. ಅಷ್ಟೇ ಅಲ್ಲದೇ ಕೆಲವು ಸುತ್ತುಗಳ ಪರೀಕ್ಷೆ ಸಹ ಇಲ್ಲಿರುತ್ತದೆ. ತುಂಡು ಉಡುಗೆ ಧರಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಲು ನಾನು ಇಷ್ಟಪಡುವುದಿಲ್ಲ’ ಎಂದು ಹೇಮಾ ನಿರಂಜನ್ ಹೇಳಿದ್ದಾರೆ.
‘ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ವ್ಯಾಯಾಮ ಮಾಡಿ ಆರು ಕೆಜಿ ದೇಹದ ತೂಕ ಇಳಿಸಿಕೊಂಡಿದ್ದೀನಿ. 33 ಸ್ಪರ್ಧಿಗಳು ಭಾಗವಹಿಸಿದ್ದ ಪರ್ಸೋನಾ ಮಿಸಸ್ ಇಂಡಿಯಾ 2022 ಸ್ಪರ್ಧೆಯಲ್ಲಿ ನಾನು ವಿಜೇತಳಾಗಿದ್ದಕ್ಕೆ ಖುಷಿ ಆಗಿದೆ. ಉದ್ಯಮಿಯಾಗೂ ನಾನು ಕಾರ್ಯ ನಿರ್ವಹಿಸುತ್ತಿದ್ದೇನೆ. ಉತ್ತಮ ಅವಕಾಶ ಸಿಕ್ಕರೆ ಸಿನಿಮಾದಲ್ಲಿಯೂ ನಟಿಸುತ್ತೇನೆ’ ಎಂದಿದ್ದಾರೆ ಹೇಮಾ ನಿರಂಜನ್.
Published On - 4:02 pm, Sun, 24 July 22