- Kannada News Photo gallery PM Modi meets Shashi Tharoor other members of all party delegation For Anti Terror Outreach Effort
ಭಾರತದ ಪ್ರತಿನಿಧಿಯಾಗಿ ವಿದೇಶಕ್ಕೆ ತೆರಳಿದ್ದ ವಿವಿಧ ಪಕ್ಷಗಳ ನಾಯಕರ ಜೊತೆ ಪ್ರಧಾನಿ ಮೋದಿ ಔತಣಕೂಟ
ಭಯೋತ್ಪಾದನೆ ವಿರುದ್ಧದ ಭಾರತದ ನಿಲುವು ತಿಳಿಸಲು ವಿವಿಧ ದೇಶಗಳಿಗೆ ಭೇಟಿ ನೀಡಿದ್ದ ಎಲ್ಲ ಪಕ್ಷಗಳ ಸಂಸದರ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ಮಾಡಿದ್ದಾರೆ. ವಿವಿಧ ದೇಶಗಳಿಗೆ ಭೇಟಿ ನೀಡಿದ ವಿವಿಧ ನಿಯೋಗಗಳ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಔತಣ ಕೂಟ ಏರ್ಪಡಿಸಿದ್ದರು. ಇದರಲ್ಲಿ ಭಾಗವಹಿಸಿದ್ದ ನಿಯೋಗದ ಸದಸ್ಯರು ವಿವಿಧ ರಾಷ್ಟ್ರಗಳಲ್ಲಿ ತಮ್ಮ ಸಭೆಗಳ ಕುರಿತು ಮಾತನಾಡಿದರು. ಕಾಂಗ್ರೆಸ್, ಶಿವಸೇನೆ, ಟಿಎಂಸಿ, ಆರ್ಜೆಡಿ ಸೇರಿದಂತೆ ಎಲ್ಲ ವಿಪಕ್ಷಗಳ ಸಂಸದರು ಈ ನಿಯೋಗದ ಭಾಗವಾಗಿದ್ದರು. ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ ಕ್ಷಣಗಳ ಫೋಟೋಗಳು ಇಲ್ಲಿವೆ.
Updated on: Jun 10, 2025 | 9:41 PM

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಳಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಬಗ್ಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ನೀಡಲು ತೆರಳಿದ್ದ ಸರ್ವಪಕ್ಷ ನಿಯೋಗದ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಭೆ ನಡೆಸಿದರು. ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಆ ನಿಯೋಗದಲ್ಲಿದ್ದ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರಿಗೆ ಮೋದಿ ಔತಣಕೂಟ ಏರ್ಪಡಿಸಿದ್ದರು.

ಆಪರೇಷನ್ ಸಿಂಧೂರ್ ಬಗ್ಗೆ ಜಾಗತಿಕವಾಗಿ ಮಾಹಿತಿ ನೀಡಲು ವಿವಿಧ ದೇಶಗಳಿಗೆ ತೆರಳಿದ್ದ ಎಲ್ಲ ಪಕ್ಷಗಳ ಸಂಸದರನ್ನು ಒಳಗೊಂಡ ನಿಯೋಗದ ಸದಸ್ಯರನ್ನು ಬರಮಾಡಿಕೊಂಡ ಮೋದಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರೊಂದಿಗೆ ಹಸ್ತಲಾಘವ ವಿನಿಮಯ ಮಾಡಿಕೊಂಡರು.

ಆಪರೇಷನ್ ಸಿಂಧೂರ್ ನಂತರ ಆಡಳಿತ NDA ಮೈತ್ರಿಕೂಟ ಮತ್ತು ವಿರೋಧ ಪಕ್ಷದ ಇಂಡಿಯಾ ಬಣದ ಸದಸ್ಯರ ನೇತೃತ್ವದಲ್ಲಿ ಒಟ್ಟು 7 ಸರ್ವಪಕ್ಷ ನಿಯೋಗಗಳನ್ನು ಭಾರತ ಸರ್ಕಾರ ಘೋಷಿಸಿತು.

ಇದರಲ್ಲಿ ಬಿಜೆಪಿಯ ರವಿಶಂಕರ್ ಪ್ರಸಾದ್ ಮತ್ತು ಬೈಜ್ಯಂತ್ ಪಾಂಡಾ, ಕಾಂಗ್ರೆಸ್‌ನ ಶಶಿ ತರೂರ್, ಜೆಡಿ (ಯು)ನ ಸಂಜಯ್ ಝಾ, ಶಿವಸೇನೆಯ ಶ್ರೀಕಾಂತ್ ಶಿಂಧೆ, ಡಿಎಂಕೆಯ ಕನಿಮೋಳಿ ಮತ್ತು ಎನ್‌ಸಿಪಿ (ಎಸ್‌ಪಿ) ನ ಸುಪ್ರಿಯಾ ಸುಳೆ ಅವರು 7 ನಿಯೋಗಗಳ ನೇತೃತ್ವ ವಹಿಸಿದ್ದರು.

ಇವರೆಲ್ಲರೂ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಬಗ್ಗೆ ಭಾರತದ ನೀತಿಯನ್ನು ತಿಳಿಸಲು ವಿಶ್ವದ ವಿವಿಧ ಭಾಗಗಳಿಗೆ ತೆರಳಿದ್ದರು. ಇಂದು ನಡೆದ ಸಭೆಯಲ್ಲಿ ಮೋದಿಯವರ ಜೊತೆ ಸರ್ವ ಪಕ್ಷ ನಿಯೋಗದ ಸದಸ್ಯರು ತಮ್ಮ ಅನುಭವವನ್ನು ಹಂಚಿಕೊಂಡರು.

ಕೇಂದ್ರ ಸರ್ಕಾರವು ಈಗಾಗಲೇ 50ಕ್ಕೂ ಹೆಚ್ಚು ಜನರನ್ನು ಒಳಗೊಂಡ 7 ನಿಯೋಗಗಳ ಕಾರ್ಯವನ್ನು ಶ್ಲಾಘಿಸಿದೆ. ಈ ನಿಯೋಗದಲ್ಲಿರುವ ಹೆಚ್ಚಿನವರು ಪ್ರಸ್ತುತ ಸಂಸದರಾಗಿದ್ದವರು.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಈಗಾಗಲೇ ಈ ನಿಯೋಗಗಳನ್ನು ಭೇಟಿ ಮಾಡಿದ್ದಾರೆ ಮತ್ತು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತದ ಬಲವಾದ ನಿಲುವನ್ನು ತಿಳಿಸುವಲ್ಲಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರಂತಹ ವಿಪಕ್ಷದ ನಾಯಕರು ಕೂಡ ಎನ್ಡಿಎ ಮೈತ್ರಿಕೂಟದ ಸದಸ್ಯರೊಂದಿಗೆ ವಿದೇಶಗಳಲ್ಲಿ ಭಾರತೀಯ ಉದ್ದೇಶವನ್ನು ಪ್ರತಿಪಾದಿಸುವಲ್ಲಿ ಸೇರಿಕೊಂಡರು.

ಮೋದಿ ಕಳುಹಿಸಿದ ನಿಯೋಗಗಳಲ್ಲಿನ ಪ್ರಮುಖ ಮಾಜಿ ಸಂಸದರಲ್ಲಿ ಮಾಜಿ ಕೇಂದ್ರ ಸಚಿವರಾದ ಗುಲಾಮ್ ನಬಿ ಆಜಾದ್ ಮತ್ತು ಸಲ್ಮಾನ್ ಖುರ್ಷಿದ್ ಕೂಡ ಸೇರಿದ್ದಾರೆ. ಅವರೆಲ್ಲರೂ ಇಂದು ಮೋದಿಯ ಔತಣಕೂಟದಲ್ಲಿ ಭಾಗಿಯಾಗಿದ್ದರು.




