
ಒಂದಷ್ಟು ಕಾರಣಗಳಿಂದ ನಿರೀಕ್ಷೆ ಹುಟ್ಟುಹಾಕಿರುವ ಕನ್ನಡದ ‘ಪೌಡರ್’ ಸಿನಿಮಾಗೆ ಇತ್ತೀಚೆಗೆ ಪ್ರೀ-ರಿಲೀಸ್ ಇವೆಂಟ್ ಮಾಡಲಾಗಿದೆ. ‘ಪೌಡರ್ ಹಬ್ಬ’ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ಆಗಸ್ಟ್ 15ರಂದು ಬೆಂಗಳೂರಿನ ‘ಫೀನಿಕ್ಸ್ ಮಾಲ್ ಆಫ್ ಏಷಿಯಾ’ದಲ್ಲಿ ಬಹಳ ಸಡಗರದಿಂದ ‘ಪೌಡರ್ ಹಬ್ಬ’ ನಡೆಯಿತು. ಈ ಇವೆಂಟ್ನಲ್ಲಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ಸಮಾಗಮ ಆಯಿತು.

‘ಪೌಡರ್ ಹಬ್ಬ’ ಇವೆಂಟ್ನಲ್ಲಿ ದುನಿಯಾ ವಿಜಯ್, ಶ್ರೀಮುರಳಿ, ದಾನಿಷ್ ಸೇಠ್, ಐಂದ್ರಿತಾ ರೇ, ರೋಹಿತ್ ಪದಕಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಆ ಮೂಲಕ ವಾತಾವರಣದ ರಂಗು ಹೆಚ್ಚಿಸಿದರು.

‘ಪೌಡರ್’ ಸಿನಿಮಾದ ಕಲಾವಿರಾದ ದಿಗಂತ್ ಮಂಚಾಲೆ, ಧನ್ಯಾ ರಾಮ್ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ರವಿಶಂಕರ್ ಗೌಡ ಮುಂತಾದವರು ಸಹ ‘ಪೌಡರ್ ಹಬ್ಬ’ಕ್ಕೆ ಮೆರಗು ತಂದರು.

ಕಾಮಿಡಿ ಕಥಾಹಂದರ ಹೊಂದಿರುವ ‘ಪೌಡರ್’ ಸಿನಿಮಾಗೆ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಮಾಡಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಆಗಸ್ಟ್ 23ರಂದು ಈ ಸಿನಿಮಾ ತೆರೆ ಕಾಣಲಿದೆ.

ಝಗಮಗಿಸುವ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭರ್ಜರಿ ಮನರಂಜನೆ ಕೂಡ ಇತ್ತು. ವಾಸುಕಿ ವೈಭವ್ ಹಾಗೂ ಎಂ.ಸಿ. ಬಿಜ್ಜು ಅವರ ಸಂಗೀತ ಕಾರ್ಯಕ್ರಮ ಎಲ್ಲರನ್ನೂ ಆಕರ್ಷಿಸಿತು.

ಈ ಸಿನಿಮಾವನ್ನು ಕಾರ್ತಿಕ್ ಗೌಡ, ಯೋಗಿ ಜಿ. ರಾಜ್, ವಿಜಯ್ ಸುಬ್ರಹ್ಮಣ್ಯಂ ಅವರು ‘ಕೆ.ಆರ್.ಜಿ. ಸ್ಟೂಡಿಯೋಸ್’ ಬ್ಯಾನರ್ ಅಡಿಯಲ್ಲಿ ಮತ್ತು ಅರುನಭ್ ಕುಮಾರ್ ‘ಟಿ.ವಿ.ಎಫ್. ಮೋಷನ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.