ಇಂದು (ಏಪ್ರಿಲ್ 01) ತ್ರಿವಿಧ ದಾಸೋಹಿ ನಡೆದಾಡುವ ದೇವರು ಲಿಂಗೈಕ್ಯ ಶ್ರೀ ಶಿವಕುಮಾರ್ಶ್ರೀಗಳ 117 ನೇ ಜಯಂತಿ. ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ಬೆಳಿಗ್ಗೆ 11 ಗಂಟೆಯಿಂದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮಿಜಿ, ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಗಳು ನೆರವೇರುತ್ತಿವೆ.
ಸಿದ್ದಗಂಗಾ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪತಂಜಲಿ ರಾಮದೇವ್ ಬಾಬಾ, ಮುಂಡರಗಿಯ ಅನ್ನದಾನೇಶ್ವರ ಶ್ರೀಗಳು. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಗದಗಿನ ವೀರಶೈವ ಪುಣ್ಯಶ್ರಮದ ಕಲ್ಲಯ್ಯ ಅಜ್ಜರವರು ಸೇರಿದಂತೆ ಅನೇಕ ಪೂಜ್ಯರು ಭಾಗಿಯಾಗಲಿದ್ದಾರೆ.
ಬೆಳಿಗ್ಗೆ ರುದ್ರಾಕ್ಷಿ ಮಂಟಪದಲ್ಲಿ ಶಿವಕುಮಾರಶ್ರೀಗಳ ಪ್ರತಿಮೆ ಮೆರವಣಿಗೆ ಗದ್ದುಗೆ ಬಳಿಯಿಂದ ವಸ್ತು ಪ್ರದರ್ಶನ ಆವರಣದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಸಿದ್ಧಗಂಗಾ ಮಠದ ಭಕ್ತರು, ಮಕ್ಕಳು ಭಾಗಿಯಾಗಿದ್ದರು.
ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಶುಭಾಶಯ ಕೋರಿದ್ದಾರೆ.
ಶ್ರೀಗಳ 117ನೇ ಜನ್ಮದಿನ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ರಾಜಕೀಯ ನಾಯಕರು ಭೇಟಿ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರ್ ಶ್ರೀಗಳ ಗದ್ದುಗೆಗೆ ನಮಸ್ಕರಿಸಿ ದರ್ಶನ ಪಡೆದರು. ಬಳಿಕ ಸಿದ್ದಲಿಂಗ ಶ್ರೀಗಳನ್ನು ಭೇಟಿಯಾಗಿ ಆಶಿರ್ವಾದ ಪಡೆದರು.
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಸಿದ್ದಗಂಗಾ ಮಠಕ್ಕೆ ಆಗಮಿಸಿ ಶಿವಕುಮಾರ್ ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದರು. ವಿ. ಸೋಮಣ್ಣ ಇಂದು (ಏ.01) ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಕೂಡ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಬಳಿಕ ಸಿದ್ದಲಿಂಗ ಶ್ರೀಗಳನ್ನು ಭೇಟಿಯಾಗಿ ಆಶಿರ್ವಾದ ಪಡೆದರು.
Published On - 12:53 pm, Mon, 1 April 24