ಉಡುಪಿ: ಕಳೆದ 50 ವರ್ಷಗಳಿಂದ ಮಣ್ಣಿನ ರಸ್ತೆ ರಿಪೇರಿ ಮಾಡುತ್ತಿರುವ ವೃದ್ಧ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶ್ರೀನಿವಾಸ ಮೂಲ್ಯ ಅವರು ಕಳೆದ 50 ವರ್ಷಗಳಿಂದ ತಮ್ಮ ಊರಿನ ಹದಗೆಟ್ಟ ಮಣ್ಣಿನ ರಸ್ತೆಯನ್ನು ಏಕಾಂಗಿಯಾಗಿ ದುರಸ್ತಿ ಮಾಡುತ್ತಿದ್ದಾರೆ. ಅವರ ಈ ಏಕಾಂಗಿ ಹೋರಾಟವು ಸ್ಥಳೀಯ ಆಡಳಿತದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ನರೇಗಾ ಯೋಜನೆಯ ಅನುದಾನ ಬಂದಿದ್ದರೂ, ರಸ್ತೆ ದುರಸ್ತಿಗೆ ಹಣ ಬಳಕೆಯಾಗಿಲ್ಲ. ಶ್ರೀನಿವಾಸ ಮೂಲ್ಯ ಅವರ ಪ್ರಯತ್ನವು ಗಮನಾರ್ಹವಾಗಿದ್ದು, ಸರ್ಕಾರದಿಂದ ಸಹಾಯದ ಅಗತ್ಯವಿದೆ.
Updated on: Feb 04, 2025 | 2:00 PM

ಉಡುಪಿ ಜಿಲ್ಲೆಯ ಕಾರ್ಕಳದಲ್ಲೂ ಇದ್ದಾರೆ ದಶರಥ ಮಾಂಝಿ. ಇವರ ಕಾರ್ಯ ಕಾರ್ಕಳ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನ ಮರ್ಣೆ ಗ್ರಾಮದ ಮರ್ಣೆ ಗ್ರಾಮದ ಅಪ್ಪಿಯಣ್ಣ/ಶ್ರೀನಿವಾಸ ಮೂಲ್ಯ ಕಾರ್ಕಳದ ದಶರಥ ಮಾಂಝಿ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನ ಮರ್ಣೆ ಗ್ರಾಮದಿಂದ ದೊಂಬರಪಲ್ಕೆಗೆ ಸಂಪರ್ಕಿಸುವ ರಸ್ತೆ ಹದಗೆಟ್ಟಿದೆ. ವೃದ್ಧ ಶ್ರೀನಿವಾಸ ಮೂಲ್ಯ ಕಳೆದ 50 ವರ್ಷದಿಂದ ತನ್ನೂರಿನ ಮಣ್ಣಿನ ರಸ್ತೆಯನ್ನ ಏಕಾಂಗಿಯಾಗಿ ದುರಸ್ತಿ ಮಾಡುತ್ತಿದ್ದಾರೆ.

ವೃದ್ಧ ಶ್ರೀನಿವಾಸ ಮೂಲ್ಯ ಕಳೆದ 50 ವರ್ಷಗಳಿಂದ ಹಾರೆ ಪಿಕ್ಕಾಸು ಹಿಡಿದು ಏಕಾಂಗಿಯಾಗಿ 1.5ಕಿಮಿ ಮಣ್ಣಿನ ರಸ್ತೆಯನ್ನು ದುರಸ್ತಿ ಮಾಡುತ್ತಿದ್ದಾರೆ.

ಈ ರಸ್ತೆ ಮಳೆಗಾಲದಲ್ಲಿ ಸಂಚಾರಕ್ಕೆ ಸಾಧ್ಯವಾಗದಷ್ಟು ವಿಕೋಪಕ್ಕೆ ತಲುಪುತ್ತದೆ. ಇತಂಹ ರಸ್ತೆಯ ದುಸ್ಥಿತಿ ಮತ್ತು ಜನರು ಓಡಾಡದ ಪರಿಸ್ಥಿತಿ ನೋಡಿ ಶ್ರೀನಿವಾಸ ಮೂಲ್ಯ ದುರಸ್ತಿಗೆ ಕಾರ್ಯಕ್ಕೆ ಇಳಿದಿದ್ದಾರೆ. ಈ ಮಣ್ಣಿನ ರಸ್ತೆಯನ್ನು ಸುಮಾರು 15 ಕುಟುಂಬಗಳು ಆಶ್ರಯಿಸಿವೆ. ಮಳೆ ನೀರು ಹರಿದು ಹೋಗುವುದರಿಂದ ರಸ್ತೆ ಹದಗೆಡುತ್ತೆ ಎಂದು ತಿಳಿದು ಚರಂಡಿ ನಿರ್ಮಾಣ ಮಾಡುತ್ತಿದ್ದಾರೆ.

ಈ ಹಿಂದೆ ಶ್ರೀನಿವಾಸ ಮೂಲ್ಯ ಅವರು ಕಾಡಾಂಚಿನ ಮಣ್ಣಿನ ರಸ್ತೆಯುದ್ದಕ್ಕೂ ಏಕಾಂಗಿಯಾಗಿ ಚರಂಡಿ ನಿರ್ಮಾಣ ಮಾಡಿದ್ದರು. ಆದರೆ ನೀರಿನ ಪೈಪ್ ಲೈನ್ ಕಾಮಗಾರಿ ವೇಳೆ ಗುತ್ತಿಗೆದಾರರು ಚರಂಡಿ ಮುಚ್ಚಿದರು.

ನಾನು ಸಾಯುವ ಮುಂಚೆ ರಸ್ತೆಗೆ ಡಾಂಬರು ಆಗಬೇಕು ಎಂಬುವದು ಶ್ರೀನಿವಾಸ ಮೂಲ್ಯ ಅವರ ಕನಸಾಗಿದೆ. ಆದರೆ ಕಾರ್ಕಳ ತಾಲೂಕು ಆಡಳಿತ ಈವರೆಗೂ ಇತ್ತ ಗಮನ ಹರಿಸಿಲ್ಲ. ಕಾರ್ಕಳ ತಾಲೂಕಿಗೆ 2024-25ರಲ್ಲಿ ನರೇಗಾ ಯೋಜನೆಯಡಿ 670.35 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಮರ್ಣೆ ಗ್ರಾಂ ಪಂಚಾಯತ್ಗೆ 23.5ಲಕ್ಷ ರೂ. ಬಂದಿತ್ತು. ಆದರೆ, ದೊಂಬರಪಲ್ಕೆ ರಸ್ತೆ ಅಭಿವೃದ್ಧಿಗೆ ಹಣ ಬಂದಿಲ್ಲ.
























