ಬಜೆಟ್ 2024: ಎಂಎಸ್ಎಂಇ, ಮ್ಯೂಚುವಲ್ ಫಂಡ್, ಆರೋಗ್ಯ, ರಿಯಲ್ ಎಸ್ಟೇಟ್ ವಲಯಗಳ ನಿರೀಕ್ಷೆಗಳಿವು
ನವದೆಹಲಿ, ಜೂನ್ 17: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಏಳನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಜುಲೈ ಕೊನೆಯ ವಾರದಲ್ಲಿ ಇರುವ ಬಜೆಟ್ಗಾಗಿ ನಿರ್ಮಲಾ ಸೀತಾರಾಮನ್ ಮತ್ತು ಟೀಮ್ ಈಗಾಗಲೇ ತುರುಸಿನ ತಯಾರಿ ನಡೆಸುತ್ತಿದೆ. ಎಂಎಸ್ಎಂಇ, ಆರೋಗ್ಯ, ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ವಲಯಗಳು ಬಜೆಟ್ನಿಂದ ಬಹಳಷ್ಟು ನಿರೀಕ್ಷಿಸುತ್ತಿವೆ. ಈ ಬಗ್ಗೆ ಒಂದು ಪುಟ್ಟ ವರದಿ...
1 / 7
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಜೂನ್ 22ರಂದು ನವದೆಹಲಿಯಲ್ಲಿ ಜಿಎಸ್ಟಿ ಮಂಡಳಿ ಸಭೆ ನಡೆಸಲಿದ್ದಾರೆ. ಜುಲೈ 21ರ ಬಳಿಕ ಆ ವಾರದಲ್ಲಿ ಬಜೆಟ್ ಮಂಡನೆ (Union Budget 2024) ಆಗಬಹುದು. ವಿವಿಧ ವಲಯಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿವೆ. ಅಂಥ ಕೆಲ ವಲಯಗಳು ಮತ್ತು ಅವುಗಳ ನಿರೀಕ್ಷೆಗಳೇನು ಈ ವಿವರ ಮುಂದಿನ ಫೋಟೋಗಳಲ್ಲಿ ಓದಬಹುದು.
2 / 7
ರಿಯಲ್ ಎಸ್ಟೇಟ್ ವಲಯ: ಜಿಎಸ್ಟಿ ಸರಳೀಕರಣ ಸೇರಿದಂತೆ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕು. ಅಗ್ಗದ ದರಕ್ಕೆ ವಸತಿ ಲಭ್ಯತೆ ಆಗುವುದಕ್ಕೆ ಸರ್ಕಾರ ಅದ್ಯತೆ ಕೊಡಬೇಕು. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ ಗಟ್ಟಿಗೊಳ್ಳಲು ಸಾಧ್ಯ ಎನ್ನುವ ಅಭಿಪ್ರಾಯ ಇದೆ.
3 / 7
ಆಯುಷ್ ವಲಯ: ಆಲೋಪಥಿಗೆ ಪರ್ಯಾಯವಾದ ಆರೋಗ್ಯ ಕ್ಷೇತ್ರ ಬಹಳ ಜನಪ್ರಿಯವಾಗುತ್ತಿದೆ. ಮುಂದಿನ ವರ್ಷದಲ್ಲಿ ಈ ವಲಯ 70 ಬಿಲಿಯನ್ ಡಾಲರ್ನಷ್ಟು ಬೃಹತ್ತಾಗಿರಬಹುದು. ಸಂಶೋಧನೆಗೆ ಹೂಡಿಕೆ, ಆಯುಷ್ ಉತ್ಪನ್ನಗಳಿಗೆ ಸಬ್ಸಿಡಿ ಇತ್ಯಾದಿ ಸೇರಿದಂತೆ ಈ ವಲಯಕ್ಕೆ ವಿಶೇಷ ಪ್ಯಾಕೇಜ್ ಅನ್ನು ನಿರೀಕ್ಷಿಸಲಾಗುತ್ತಿದೆ.
4 / 7
ಆರೋಗ್ಯ ವಲಯ: ಉತ್ತಮ ವೈದ್ಯಕೀಯ ವ್ಯವಸ್ಥೆ ಇರುವುದು ಜನರ ಆರೋಗ್ಯಕ್ಕೆ ಮಾತ್ರವಲ್ಲ ದೇಶದ ಆರ್ಥಿಕ ಆರೋಗ್ಯಕ್ಕೂ ಪೂರಕವಾಗಿರುತ್ತದೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಪಡೆಯುವುದರಿಂದ ಹಿಡಿದು ವಿವಿಧ ಇನ್ಫ್ರಾಸ್ಟ್ರಕ್ಚರ್ಗಳಿಗೆ ಸರ್ಕಾರ ಬಂಡವಾಳ ವೆಚ್ಚ ಹೆಚ್ಚಿಸಬೇಕು ಎನ್ನುವ ಅಪೇಕ್ಷೆ ಈ ವಲಯದಿಂದ ಕೇಳಿಬರುತ್ತಿದೆ.
5 / 7
ಎಂಎಸ್ಎಂಇ ವಲಯ: ಸೈಬರ್ ಸೆಕ್ಯೂರಿಟಿ ಅಪಾಯ, ಆರ್ಥಿಕ ಹಿಂಜರಿತ, ಸರಬರಾಜು ಸರಪಳಿ ಸ್ಥಗಿತ ಇತ್ಯಾದಿ ಬಾಹ್ಯ ಅಂಶಗಳಿಂದ ಎಂಎಸ್ಎಂಇ ಉದ್ದಿಮೆ ವಲಯವನ್ನು ರಕ್ಷಿಸುವಂತಹ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು. ತಳಮಟ್ಟದಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಖಾಸಗಿ ವಲಯಗಳ ನಡುವೆ ಸಮನ್ವತೆ ಸಾಧಿಸಲು ಹೊಸ ಸರ್ಕಾರ ಆದ್ಯತೆ ಕೊಡಬೇಕು ಎನ್ನುವ ಬೇಡಿಕೆ ಇದೆ.
6 / 7
ಮ್ಯೂಚುವಲ್ ಫಂಡ್: ಈ ವಲಯದಲ್ಲಿ ಹೂಡಿಕೆಗಳಿಗೆ ತೆರಿಗೆ ವಿನಾಯಿತಿ, ನಿಯಮ ಸ್ಪಷ್ಟತೆ, ಹೂಡಿಕೆದಾರರಿಗೆ ಹಣಕಾಸು ಅರಿವು ಮೂಡಿಸುವುದು ಇವೇ ಮುಂತಾದ ಕ್ರಮಗಳನ್ನು ಕೈಗೊಳ್ಳುವುದರಿಂದ ಉದ್ಯಮ ಗಟ್ಟಿಗೊಳ್ಳುತ್ತದೆ. ಭಾರತದಲ್ಲಿ ವಿವಿಧ ಮ್ಯೂಚುವಲ್ ಫಂಡ್ ಕಂಪನಿಗಳ ಅಡಿಯಲ್ಲಿ ನಿರ್ವಹಣೆ ಆಗುತ್ತಿರುವ ಹೂಡಿಕೆ ಮೊತ್ತ ಬರೋಬ್ಬರಿ 57 ಲಕ್ಷಕೋಟಿ ರೂಗಿಂತಲೂ ಹೆಚ್ಚು ಎಂಬುದು ಗಮನಾರ್ಹ ಸಂಗತಿ.
7 / 7
ಆರ್ ಅಂಡ್ ಡಿ: ದೀರ್ಘಾವಧಿಯಲ್ಲಿ ದೇಶದ ಬೆಳವಣಿಗೆಗೆ ಬಹಳ ಮುಖ್ಯವಾಗಿರುವ ವಲಯ ಎಂದರೆ ಅದು ಸಂಶೋಧನೆ ಕ್ಷೇತ್ರದ್ದು. ಇಲ್ಲಿ ಪ್ರತೀ ಬಜೆಟ್ನಲ್ಲೂ ಆರ್ ಅಂಡ್ ಡಿ ವಲಯಕ್ಕೆ ಹೆಚ್ಚಿನ ಅನುದಾನದ ನಿರೀಕ್ಷೆ ಇದ್ದೇ ಇರುತ್ತದೆ. ಬಹುತೇಕ ಎಲ್ಲಾ ಬಜೆಟ್ಗಳಲ್ಲೂ ನಿರಾಸೆಯೇ ಪಡೆಯುತ್ತಿದೆ ಈ ವಲಯ. ಈ ಬಾರಿಯ ಬಜೆಟ್ನಲ್ಲಿ ಆರ್ ಅಂಡ್ ಡಿ ಕ್ಷೇತ್ರಕ್ಕೆ ಬಂಡವಾಳ ವೆಚ್ಚ ಹೆಚ್ಚುತ್ತದಾ ನೋಡಬೇಕು.