Hibiscus Benefits: ದಾಸವಾಳ ಕೇವಲ ಕೂದಲಿಗಷ್ಟೇ ಅಲ್ಲ, ಇದರಲ್ಲಿದೆ ಅನೇಕ ಆರೋಗ್ಯ ಪ್ರಯೋಜನ
ಸಾಮಾನ್ಯವಾಗಿ ಮನೆಗಳ ಅಂದ-ಚೆಂದಕ್ಕೆ, ದೇವರ ಪೂಜೆಗಳಿಗೆ ಹೆಚ್ಚಾಗಿ ಬಳಸುವ ದಾಸವಾಳದಲ್ಲಿ ಅನೇಕ ಆರೋಗ್ಯ ಪ್ರಯೋಜನೆಗಳಿವೆ. ದಾಸವಾಳದ ಎಲೆ, ಬೇರು, ಹೂ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ದಾಸವಾಳದಲ್ಲಿ ನೈಟ್ರೋಜನ್, ಕೊಬ್ಬು, ನಾರಿನಂಶ, ಕ್ಯಾಲ್ಸಿಯಂ, ರಂಜಕ, ಕಬ್ಬಿಣಾಂಶ, ಥಯಮಿನ್, ರೈಬೋಪ್ಲೇವಿನ್ ಮತ್ತು ಆಸ್ಕಾರ್ಬಿಕ್ ಆಮ್ಲಗಳಿವೆ. ದಾಸವಾಳದಿಂದ ನಿಮ್ಮ ಆನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ.
Updated on: Jul 21, 2022 | 7:10 AM

ದಾಸವಾಳ ನೆತ್ತಿಯನ್ನು ರಕ್ಷಿಸುತ್ತದೆ: ದಾಸವಾಳದ ಹೂವಿನ ರಸವನ್ನು ನೆತ್ತಿಗೆ ಹಾಕುವುದರಿಂದ ನೆತ್ತಿ ತಂಪಾಗುತ್ತೆ. ಹಾಗೂ ಇದು ಸೂರ್ಯನ ಬಿಸಿಲಿನ ಕಿರಣಗಳಿಂದ ನೆತ್ತಿ ಸುಡುವುದನ್ನು ತಪ್ಪಿಸುತ್ತದೆ. ಹೀಗಾಗಿ ತಲೆಬಿಸಿಯಾಗುವುದನ್ನು ತಡೆದು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಇದಕ್ಕಾಗಿಯೇ ಕೂದಲಿನ ಸುರಕ್ಷತೆ ಕಾಪಾಡುವ ಹಲವು ಉತ್ಪನ್ನಗಳಲ್ಲಿ ದಾಸವಾಳ ಬಳಕೆಯಾಗಿರುವುದನ್ನು ನೀವು ಗಮನಿಸಿರಬಹುದು.

ಡ್ಯಾಂಡ್ರಫ್‌ನಿಂದ ಮುಕ್ತಿ ನೀಡುತ್ತೆ: ದೇಹದ ಅತಿಯಾದ ಉಷ್ಣತೆಯಿಂದ ನೆತ್ತಿಯ ಮೇಲಿನ ಚರ್ಮ ಸಿಪ್ಪೆಯಂತೆ ಸುಲಿಯುತ್ತದೆ. ಇದನ್ನೇ ಡ್ಯಾಂಡ್ರಫ್ ಎನ್ನುತ್ತೇವೆ. ಇದನ್ನು ಹೋಗಲಾಡಿಸಲು ದಾಸವಾಳದ ಹೂವಿನ ನೀರು ಸಹಾಯ ಮಾಡುತ್ತದೆ.

ಕೂದಲನ್ನು ಬುಡದಿಂದ ಗಟ್ಟಿಗೊಳಿಸುತ್ತದೆ: ಪೋಷಕಾಂಶಗಳ ಕೊರತೆ ಹಾಗೂ ಕೂದಲನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದರಿಂದ ಕೂದಲು ನಿರ್ಜೀವವಾಗಿ ಉದುರಲು ಆರಂಭವಾಗುತ್ತದೆ. ಇದನ್ನು ತಡೆಯಲು ದಾಸವಾಳ ಹೂಗಳು ಹೆಚ್ಚು ಸಹಕಾರಿ.

ಮುಟ್ಟು ಬಾಧೆ ನಿವಾರಣೆ: ಅಧಿಕ ರಕ್ತಸ್ರಾವದಿಂದ ಬಳಲುವ ಸ್ತ್ರೀಯರು ದಾಸವಾಳದ ಹೂವಿನ ರಸವನ್ನು ಹಾಲಿನೊಡನೆ ಸೇವಿಸುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ. ಹಾಗೂ ಅನಿಯಮಿತ ಮುಟ್ಟು ಬಾಧೆ ನಿವಾರಣೆಯಲ್ಲೂ ಈ ಹೂವು ಪರಿಣಾಮಕಾರಿ.

ಉರಿಮೂತ್ರ ಸಮಸ್ಯೆ ನಿವಾರಣೆ: ಬಿಳಿ ದಾಸವಾಳದ ಹೂವಿನ ರಸಕ್ಕೆ ಕಲ್ಲು ಸಕ್ಕರೆ ಮತ್ತು ಹಾಲು ಬೆರೆಸಿ ಕುಡಿದರೆ ಉರಿಮೂತ್ರ ತೊಂದರೆ ಕಡಿಮೆಯಾಗುತ್ತೆ. ಹಾಗೂ ಸುಟ್ಟಗಾಯ, ಆಮಶಂಕೆ ಭೇದಿಯಂತಹ ಸಂದರ್ಭದಲ್ಲೂ ಈ ದಾಸವಾಳ ಸಂಜೀವಿನಿಯಂತೆ ಕಾರ್ಯನಿರ್ವಹಿಸಬಲ್ಲದು.

ಮಧುಮೇಹ ನಿವಾರಣೆಗೆ ಸಹಕಾರಿ: ಮಧುಮೇಹ ಇರುವವರು ಬಿಳಿ ದಾಸವಾಳದ ಬೇರನ್ನು ನೀರಿನಲ್ಲಿ ಅರೆದು ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ ನಾಲ್ಕು ಚಮಚದಷ್ಟು ಸೇವಿಸಿದರೆ ಸಮಸ್ಯೆ ನಿವಾರಣೆಯಾಗುತ್ತೆ.



















