ಖ್ಯಾತನಾಮರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯ ವಿಷಯ. ಅದರಲ್ಲೂ ಕೆಲವೊಮ್ಮೆ ತಮ್ಮ ನೆಚ್ಚಿನ ತಾರೆಯರ ಜೊತೆ ಒಂದೇ ಒಂದು ಫೋಟೋಗಾಗಿ ಹರಸಾಹಸಪಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ಅಭಿಮಾನಿಗೆ ಅಂತಹ ಯಾವುದೇ ಸಾಹಸ ಎದುರಾಗಿಲ್ಲ. ಒಂದೇ ಒಂದು ಸೆಲ್ಫಿ ಕ್ಲಿಕ್ನಿಂದ ಟೆನಿಸ್ ತಾರೆಯನ್ನೇ ಮೋಡಿ ಮಾಡಿದ್ದಾರೆ.
ಹೌದು, ವೆನೆಜುವೆಲಾ-ಸ್ಪೇನ್ನ ಖ್ಯಾತ ಟೆನಿಸ್ ಆಟಗಾರ್ತಿ ಗಾರ್ಬಿನ್ ಮುಗುರೂಝ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಅದು ಕೂಡ ತಮ್ಮ ಅಭಿಮಾನಿ ಜೊತೆ ಎಂಬುದೇ ಇಲ್ಲಿ ವಿಶೇಷ.
2016 ರಲ್ಲಿ ಫ್ರೆಂಚ್ ಓಪನ್ ಹಾಗೂ 2017 ರಲ್ಲಿ ವಿಂಬಲ್ಡನ್ ಕಿರೀಟ ಗೆದ್ದಿದ್ದ ಗಾರ್ಬಿನ್ ಮುಗುರೂಝ ವಿಶ್ವದ ನಂಬರ್ 1 ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದರು. ಇದೀಗ ಟೆನಿಸ್ ಅಂಗಳದಿಂದ ದೂರವೇ ಉಳಿದಿರುವ ಮುಗುರೂಝ ತಮ್ಮ ಬಹುಕಾಲದ ಗೆಳೆಯ ಆರ್ಥರ್ ಬೋರ್ಗೆಸ್ ಜೊತೆ ವಿವಾಹವಾಗಲು ನಿರ್ಧರಿಸಿದ್ದಾರೆ.
ವಿಶೇಷ ಎಂದರೆ ಆರ್ಥರ್ ಬೋರ್ಗೆಸ್ ಹಾಗೂ ಗಾರ್ಬಿನ್ ಮುಗುರೂಝ ನಡುವಣ ಪರಿಚಯ ಶುರುವಾಗಿದ್ದು ಒಂದೇ ಒಂದು ಸೆಲ್ಫಿಯಿಂದ. 2021 ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರ್ಥರ್ ಬೋರ್ಗೆಸ್ ಬಂದು ಸೆಲ್ಫಿ ಕೇಳಿದ್ದರು. ಈ ಸೆಲ್ಫಿ ಕ್ಲಿಕ್ನೊಂದಿಗೆ ಇಬ್ಬರೂ ಬಂಧಿಯಾಗಿದ್ದು ವಿಶೇಷ.
ತಮ್ಮ ಪ್ರೇಮಕಥೆಯ ಬಗ್ಗೆ ಮಾತನಾಡಿರುವ ಗಾರ್ಬಿನ್ ಮುಗುರೂಝ, ನನಗೆ ಆರ್ಥರ್ ಸಿಕ್ಕಿದ್ದೇ ಆಕಸ್ಮಿಕ. ನ್ಯೂಯಾರ್ಕ್ನ ಸೆಂಟ್ರಲ್ ಪಾರ್ಕ್ನ ಸಮೀಪವೇ ನನ್ನ ಹೋಟೇಲ್ ಇತ್ತು. ಹೋಟೇಲ್ನಲ್ಲಿದ್ದು ಬೋರ್ ಆಗಿದ್ದ ಕಾರಣ ಅಂದು ನಾನು ವಾಕಿಂಗ್ ಹೊರಟಿದ್ದೆ. ಈ ವೇಳೆ ಆರ್ಥರ್ ಎದುರಾಗಿದ್ದ.
ಅಲ್ಲದೆ ನನ್ನ ಬಳಿ ಬಂದು ಸೆಲ್ಫಿ ಕ್ಲಿಕ್ಕಿಸಿಕೊಂಡ ಆರ್ಥರ್ ಬೋರ್ಗೆಸ್, ಯುಎಸ್ ಓಪನ್ ಟೂರ್ನಿಯಲ್ಲಿ ನಿಮಗೆ ಒಳ್ಳೆದಾಗಲಿ ಎಂದು ಹಾರೈಸಿದ್ದ. ಅಂದು ಆರ್ಥರ್ ಮಾತಿಗಿಂತ, ಆತನ ಸೌಂದರ್ಯ ನನ್ನನ್ನು ಆಕರ್ಷಿತು. ಇದಾದ ಬಳಿಕ ನಾವಿಬ್ಬರೂ ಹಲವು ಬಾರಿ ಭೇಟಿಯಾಗಿದ್ದೆವು.
ವೃತ್ತಿಯಲ್ಲಿ ಮಾಡೆಲ್ ಆಗಿರುವ ಆರ್ಥರ್ ಬೋರ್ಗೆಸ್ ಆ ಬಳಿಕ ನನ್ನ ಆತ್ಮೀಯ ಗೆಳೆಯನಾಗಿಬಿಟ್ಟಿದ್ದ. ಇದಾಗಿ ಎರಡು ವರ್ಷಗಳ ಬಳಿಕ ಸ್ಪೇನ್ನ ಮಾರ್ಬಲಾದಲ್ಲಿ ನನ್ನನ್ನು ಪ್ರೊಪೋಸ್ ಮಾಡಿದ್ದ. ನಿಜ ಹೇಳಬೇಕೆಂದರೆ ಅಂತಹದೊಂದು ಪ್ರೊಪೋಸ್ ಅನ್ನು ನಾನು ನಿರೀಕ್ಷಿಸುತ್ತಿದ್ದೆ. ಹೀಗಾಗಿ ಆನಂದಬಾಷ್ಪದೊಂದಿಗೆ ಅಂದು ನಾನು ಮರು ಮಾತನಾಡದೇ ಯೆಸ್ ಎಂದಿದ್ದೆ ಎಂದು ಗಾರ್ಬಿನ್ ಮುಗುರೂಝ ತಮ್ಮ ಹಳೆಯ ಲವ್ಸ್ಟೋರಿಯನ್ನು ಮೆಲುಕು ಹಾಕಿದ್ದಾರೆ.
ಇದೀಗ ಗಾರ್ಬಿನ್ ಮುಗುರೂಝ-ಆರ್ಥರ್ ಬೋರ್ಗೆಸ್ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದು, ಅದರ ಮೊದಲ ಹೆಜ್ಜೆಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಶುಭ ಸುದ್ದಿಯನ್ನು ಗಾರ್ಬಿನ್ ಮುಗುರೂಝ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Published On - 6:21 pm, Wed, 31 May 23