ಅರ್ಕಾವತಿ ಹಗರಣ: ನಿಜವಾದ ಖಜಾನೆ ಕಾವಲುಗಾರರಾಗಿದ್ರೆ ಏಕೆ ಕ್ರಮ ಕೈಗೊಳ್ಳಲಿಲ್ಲ, ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ
ಖಜಾನೆ ರಕ್ಷಕನಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾರೆ. ತಮ್ಮ ಮುಂದೆಯೇ ಈ ವಿಚಾರ ಇತ್ತು, ಆಗ ಏಕೆ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ಮಾಡಿದರು.
ದೆಹಲಿ: ಖಜಾನೆ ರಕ್ಷಕನಂತೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮಾತನಾಡುತ್ತಾರೆ. ತಮ್ಮ ಮುಂದೆಯೇ ಈ ವಿಚಾರ ಇತ್ತು, ಆಗ ಏಕೆ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ಮಾಡಿದರು. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನ್ಯಾ.ಕೆಂಪಣ್ಣ ಆಯೋಗ 8 ಸಾವಿರ ಕೋಟಿ ಮೌಲ್ಯದ ಭೂ ಅಕ್ರಮದ ಕುರಿತು ವರದಿ ನೀಡಿದೆ. ಕಾಂಗ್ರೆಸ್ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ನಿಜವಾದ ಖಜಾನೆ ಕಾವಲುಗಾರರಾಗಿದ್ರೆ ಏಕೆ ಕ್ರಮ ಕೈಗೊಳ್ಳಲಿಲ್ಲ. ಕ್ರಮ ಕೈಗೊಳ್ಳದ ಕಾರಣ ಸಂಶಯದ ಬೆಟ್ಟು ಕಾಂಗ್ರೆಸ್ ಕಡೆ ಹೋಗ್ತಿದೆ. 4 ವರ್ಷ ಕ್ರಮ ಕೈಗೊಳ್ಳದಿರುವುದು ನಮ್ಮ ತಪ್ಪು ಅಂದ್ರೆ ಒಪ್ಪಿಕೊಳ್ತೇವೆ. ಆದರೆ ಸಂಪುಟದ ಮುಂದೆ ಬಂದ ವರದಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸಿ.ಟಿ ರವಿ ಹರಿಹಾಯ್ದರು.
ಅರ್ಕಾವತಿ ಹಗರಣದಲ್ಲಿ ಸಿದ್ದರಾಮಯ್ಯ ಜೈಲು ಸೇರುತ್ತಾರೆ: ಕಟೀಲ್
ಇನ್ನು ಇತ್ತೀಚೆಗೆ ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿ, ಅರ್ಕಾವತಿ ಬಡಾವಣೆ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲು ಸೇರುತ್ತಾರೆ ಎಂದು ಹೇಳಿದ್ದರು. ಅರ್ಕಾವತಿ ರೀ-ಡೂ ಕೇಸ್‌ನಲ್ಲಿ ಇರುವವರೆಲ್ಲರೂ ಜೈಲಿಗೆ ಹೋಗುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಅರ್ಕಾವತಿ ಮಾತ್ರವಲ್ಲ, ಹಾಸಿಗೆ ದಿಂಬು ಖರೀದಿಯಲ್ಲೂ ಅಕ್ರಮ ನಡೆದಿದೆ. ಸಿದ್ದರಾಮಯ್ಯ ಅವಧಿಯ ಹಗರಣಗಳ ಬಗ್ಗೆ ದಾಖಲೆಗಳನ್ನು ಮುಚ್ಚಿಟ್ಟಿದ್ದಾರೆ. ದಾಖಲೆಗಳನ್ನು ಹುಡುಕಲು ನಮಗೆ ತುಂಬಾ ಕಷ್ಟವಾಗಿದೆ ಎಂದು ತಿಳಿಸಿದ್ದರು.
ಅರ್ಕಾವತಿ ಹಗರಣದ ತನಿಖೆಯನ್ನ ನಾವು ಪೂರ್ಣಗೊಳಿಸುತ್ತೇವೆ. ಲೋಕಾಯುಕ್ತದ ಮೂಲಕ 52 ಪ್ರಕರಣಗಳು ಹೊರಗೆ ಬರುತ್ತವೆ. ಅರ್ಕಾವತಿಯ ಹಗರಣದ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ಎಲ್ಲ ತನಿಖೆಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಭ್ರಷ್ಟಾಚಾರ ಬಯಲು; ಟ್ವಿಟರ್ನಲ್ಲಿ ಚಾಟಿ ಬೀಸಿದ ರಾಜ್ಯ ಬಿಜೆಪಿ
ಏನಿದು ಅರ್ಕಾವತಿ ಹಗರಣ
ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದರೆ 2015ರಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘನೆ ಮಾಡಿ, ಅರ್ಕಾವತಿ ಬಡಾವಣೆಯಲ್ಲಿ 541 ಎಕರೆ ಡಿನೋಟಿಫೈ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಆಗಿನ ವಿರೋಧ ಪಕ್ಷಗಳು ಮತ್ತು ಇತರೆ ಸಂಘಟನೆಗಳು ಸರ್ಕಾರದ ಮೇಲೆ ಮುಗಿಬಿದ್ದಿದ್ದರು. ಹಾಗಾಗಿ ಅಂದಿನ ಸರ್ಕಾರ ತನಿಖಾ ಆಯೋಗವನ್ನು ರಚನೆ ಮಾಡಿ ಆದೇಶ ಹೊರಡಿಸಿತ್ತು. ನಿವೃತ್ತ ನಾ. ಎಚ್.ಎಸ್ ಕೆಂಪಣ್ಣ ಅವರ ನೇತೃತ್ವದಲ್ಲಿ ಆಯೋಗವನ್ನು ನೇಮಿಸಲಾಗಿತ್ತು. ಆದರೆ 4 ವರ್ಷಗಳು ಕಳೆದರೂ ಆಯೋಗ ತನಿಖೆ ಮಾಡಿದ ವರದಿಯನ್ನು ಇನ್ನು ಮಂಡಿಸಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:17 pm, Fri, 24 February 23