ಚೀನಾ ಸೈನಿಕರು ಭಾರತಕ್ಕೆ ನುಸಳುತ್ತಿದ್ದಾರೆ, ಇದರ ಬಗ್ಗೆ ಕೇಂದ್ರಕ್ಕೆ ಗಮನವಿಲ್ಲ: ಸಚಿವ ತಿಮ್ಮಾಪುರ
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇದ್ದು, ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ವಿಪಕ್ಷ ಕಾಂಗ್ರೆಸ್ ಮತ್ತಿತರ ಎಡಪಕ್ಷಗಳು ರಾಜಕೀಯ ಕೆಸರೆರಚಾಟಗಳನ್ನು ಮುಂದುವರಿಸಿವೆ. ಇದೀಗ ಮಾತನಾಡಿದ ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆ ಸಚಿವ ಬಿ.ತಿಮ್ಮಾಪುರ, ದೇಶದಲ್ಲಿ ಇಷ್ಟೊಂದು ಸಮಸ್ಯೆ ಇದ್ದರೂ ಪ್ರಧಾನ ಮಂತ್ರಿಗೆ ಕಾಣುತ್ತಿಲ್ಲ. ಬಿಜೆಪಿ ರಾಮ ಮಂದಿರವನ್ನ ರಾಜಕೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದರು.
ಬಾಗಲಕೋಟೆ, ಜ.14: ದೇಶದಲ್ಲಿ ಇಷ್ಟೊಂದು ಸಮಸ್ಯೆ ಇದ್ದರೂ ಪ್ರಧಾನ ಮಂತ್ರಿಗೆ ಕಾಣುತ್ತಿಲ್ಲ. ಬಿಜೆಪಿ ರಾಮ ಮಂದಿರವನ್ನ ರಾಜಕೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಬಕಾರಿ ಇಲಾಖೆ ಸಚಿವ ಆರ್.ಬಿ.ತಿಮ್ಮಾಪುರ (R.B. Thimmapura) ಹೇಳಿದರು. ರಾಮನಗರದಲ್ಲಿ ರಾಮಮಂದಿರ ಕಟ್ಟಿಸುವ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ತಿಮ್ಮಾಪುರ, ರಾಮ ಮಂದಿರ ಕಟ್ಟಲಿ ಅದರಲ್ಲಿ ತಪ್ಪೇನಿಲ್ಲ. ಎಂದರು.
ಹಿಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ದೇವಸ್ಥಾನ ನಿರ್ಮಾಣಕ್ಕಾಗಿ ಆರಾಧನ ಎನ್ನುವ ಒಂದು ಯೋಜನೆಯನ್ನೆ ತಂದಿದ್ದರು. ಪ್ರತಿ ಹಳ್ಳಿ ಹಳ್ಳಿಯಲ್ಲಿ ದೇವಸ್ಥಾನ ಕಟ್ಟಿದ್ದೇವೆ. ಸಣ್ಣ ಜಾತಿಯವರಿಗೆ ಮಂದಿರ ಕಟ್ಟಲು ಆಗಲ್ಲ. ಆದರೆ, ಅವರು ಕೂಡ ದೈವ ಭಕ್ತರು. ಅವರೆಲ್ಲ ದುರ್ಗಮ್ಮ ದೇವರಿಗೆ ಕೈ ಮುಗಿಯುತ್ತಾರೆ. ಅಂತವರಿಗೆಲ್ಲ ನಾವು ಮಂದಿರ ಕಟ್ಟಿ ಕೊಟ್ಟಿದ್ದೇವೆ ಎಂದರು.
ನಾವು ಎಷ್ಟೋ ದೇವಸ್ಥಾನ ಕಟ್ಟಿದ್ದೇವೆ, ಕಟ್ಟುತ್ತಲೇ ಇದ್ದೇವೆ. ಆದರೆ, ನಾವು ಅದನ್ನ ರಾಜಕೀಯವಾಗಿ ತೆಗೆದುಕೊಂಡಿಲ್ಲ. ಇವರು (ಬಿಜೆಪಿ) ರಾಮ ಮಂದಿರವನ್ನ ರಾಜಕೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ. ರಾಮ ಮಂದಿರ ನಮ್ಮದೇ ರಾಮ ನಮ್ಮದೇ ಆಸ್ತಿ ಎನ್ನುವ ರೀತಿ ಹೇಳುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬಾಗಲಕೋಟೆ; ರಾಮಮಂದಿರ ನಿರ್ಮಾಣದ ಸಂಕಲ್ಪದೊಂದಿಗೆ 16 ಲಕ್ಷಕ್ಕೂ ಹೆಚ್ಚು ಬಾರಿ ರಾಮನಾಮ ಬರೆದ ವೃದ್ಧೆ
ದೇಶದಲ್ಲಿ ಇಷ್ಟೊಂದು ಸಮಸ್ಯೆ ಇದ್ದರೂ ಪ್ರಧಾನಮಂತ್ರಿಗೆ ಕಾಣುತ್ತಿಲ್ಲ. ಬಿಇ, ಎಂ ಟೆಕ್ ಓದಿ ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ. ರೈತರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರೈತರ ಆತ್ಮಹತ್ಯೆ ಆಗುತ್ತಿವೆ. ಇವುಗಳ ಬಗ್ಗೆ ಮಾತಾಡಲ್ಲ. ಅಭಿವೃದ್ದಿ ಕೆಲಸ ಶೂನ್ಯ. ಬರೀ ಭಾವನಾತ್ಮಕ ವಿಚಾರ ಹೇಳುತ್ತಾರೆ. ಚುನಾವಣೆ ಬಂದಾಗೆಲ್ಲ ಹಿಂದುತ್ವ ನೆನಪಾಗುತ್ತೆ. ಏನಾದರೂ ಮಾಡಿ ಹಿಂದುಗಳನ್ನ ಸೆಳೆಯುವ ಪ್ರಯತ್ನ ಮಾಡುತ್ತಾರೆ ಎಂದರು.
ಸರ್ಕಾರ ಮಾಡುವಂತಹ ಎಂತೆಂತ ಕಠಿಣ ಸವಾಲು ಇವೆ. ಚೀನಾ ದೇಶದ ಸೈನಿಕರು ನಮ್ಮ ದೇಶಕ್ಕೆ ನುಸಳಿಕೊಂಡು ಬರುತ್ತಿದ್ದಾರೆ. ಆ ಕಡೆಗೆ ಇವರ ಗಮನ ಇಲ್ಲ. ಮಠ ಮಂದಿರದವರು, ಮಠಾಧೀಶರು ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಎಂದರು.
ನರೇಂದ್ರ ಮೋದಿ ಅವರ 11 ದಿನಗಳ ವೃತದ ಬಗ್ಗೆ ವ್ಯಂಗ್ಯವಾಡಿದ ತಿಮ್ಮಾಪುರ, ಅವರೆಷ್ಟು ದಿನ ವೃತ ಮಾಡುತ್ತಾರೆ? ಅವರೊಬ್ಬರೇನಾ ಮಾಡುವವರು? ನಮ್ಮಲ್ಲಿ 30 ದಿನಗಳ ಕಾಲ ನೀರು ಕುಡಿಯದೇ ವೃತ ಮಾಡುವವರು ಇದ್ದಾರೆ. ದೇಶದ ಪ್ರಧಾನಿ ಅಂತ ಗೌರವ ಕೊಡುತ್ತೇನೆ. ಆದರೆ, ಭಾವನಾತ್ಮಕ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಅಪೂರ್ಣ ಮಂದಿರ ಉದ್ಘಾಟನೆ ಬಗ್ಗೆ ಶಂಕರಾಚಾರ್ಯರ ಮಾತಿಗೂ ಅವರು ಗೌರವ ಕೊಡಲಿಲ್ಲ ಎಂದರು.
ಅತಂತ್ರ ಸ್ಥಿತಿಯಲ್ಲಿ ಅನಂತಕುಮಾರ್ ಹೆಗಡೆ
ಸಿಎಂ ಸಿದ್ದರಾಮಯ್ಯ ವಿರುದ್ಧ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ ವಿಚಾರವಾಗಿ ಮಾತನಾಡಿದ ತಿಮ್ಮಾಪುರ, ಸಂಸದ ಅನಂತಕುಮಾರ್ ಹೆಗಡೆ ಸ್ವಲ್ಪ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ ಅಂತಾ ಗೊಂದಲದಲ್ಲಿ ಇದ್ದಾರೆ. ಈ ಹಿಂದೆ ಅನಂತಕುಮಾರ್ ಹೆಗೆಡೆ ಅಂಬೇಡ್ಕರ್ ಬಗ್ಗೆ ಮಾತಾಡಿದ್ದರು. ಈಗ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ದಾರೆ. ಇದರಿಂದ ಅವರು ಏನು ಗಳಿಸುತ್ತಾರೋ ಗೊತ್ತಿಲ್ಲ ಎಂದರು.
ಈ ರೀತಿ ಮಾತನಾಡದಂತೆ ಪಕ್ಷ ಸೂಚಿಸಬೇಕಿತ್ತು. ಹೇಳಿಲ್ಲ. ಹೆಗಡೆ ಮಾತು ಬಿಜೆಪಿ ಸಂಸ್ಕೃತಿಯ ಸಂಕೇತ. ಇಂತ ಮಾತುಗಳು ನಿಮಗೂ, ನಿಮ್ಮ ಪಕ್ಷಕ್ಕೂ ಶೋಭೆ ತರುವುದಿಲ್ಲ. ಕೂಡಲೇ ಸಿದ್ದರಾಮಯ್ಯರ ಕ್ಷಮೆ ಕೇಳಬೇಕು. ಅನಂತಕುಮಾರ್ ಈ ರೀತಿ ಮಾತಾಡುತ್ತಾ ಹೋದರೆ ಅವರಿಗೆ ತಕ್ಕ ಪಾಠ ಹಾಗೂ ತಿರುಗೇಟು ಕೊಡಲು ನಾವು ತಯಾರಿದ್ದೇವೆ. ಆದರೆ, ಅದು ನಮ್ಮ ಸಂಸ್ಕೃತಿ ಅಲ್ಲ. ಹಾಗೆಂದು ಅದು ನಮ್ಮ ಅಸಹಾಯಕತೆ ಅಲ್ಲ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ