AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೆ ಅನ್ಯಾಯ ಮಾಡಿದವರಿಗೆ ಬಣಜಿಗ ಸಮುದಾಯ ಉತ್ತರ ಕೊಟ್ಟಿದೆ: ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ

ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್, ಅವಕಾಶ ಸಿಕ್ಕಾಗೆಲ್ಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಬಳ್ಳಾರಿಯಲ್ಲಿ ನಡೆದ ಬಣಜಿಗ ಸಮಾವೇಶದಲ್ಲೂ ಪರೋಕ್ಷ ವಾಗ್ದಾಳಿ ನಡೆಸಿದರು.

ನನಗೆ ಅನ್ಯಾಯ ಮಾಡಿದವರಿಗೆ ಬಣಜಿಗ ಸಮುದಾಯ ಉತ್ತರ ಕೊಟ್ಟಿದೆ: ಬಿಜೆಪಿ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ
ಬಣಜಿಗ ಸಮುದಾಯದಲ್ಲಿ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಜಗದೀಶ್ ಶೆಟ್ಟರ್
TV9 Web
| Updated By: Rakesh Nayak Manchi|

Updated on: Aug 13, 2023 | 2:33 PM

Share

ಬಳ್ಳಾರಿ, ಆಗಸ್ಟ್ 13: ನಮ್ಮ ಸಮಾಜಕ್ಕೆ ಧಕ್ಕೆಯಾದ್ರೆ ಏನಾಗುತ್ತೆ ಎಂದು ಎಲ್ಲರಿಗೂ ಗೊತ್ತಾಗಿದೆ. ನನಗೆ ಅನ್ಯಾಯ ಮಾಡಿದವರಿಗೆ ಬಣಜಿಗ ಸಮುದಾಯವು ಉತ್ತರ ಕೊಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ (Jagadish Shettar) ಹೇಳಿದರು. ಬಳ್ಳಾರಿಯಲ್ಲಿ ನಡೆದ ಬಣಜಿಗ ಸಮಾವೇಶದಲ್ಲಿ ಮಾತನಾಡುತ್ತಾ ಬಿಜೆಪಿ (BJP) ವಿರುದ್ಧ ಶೆಟ್ಟರ್ ಪರೋಕ್ಷ ವಾಗ್ದಾಳಿ ನಡೆಸಿದರು.

ಬಣಜಿಗ ಸಮುದಾಯ ಒಂದು ಸ್ವಾಭಿಮಾನದ ಸಮಾಜ. ನಮ್ಮ ಸಮಾಜಕ್ಕೆ ಧಕ್ಕೆಯಾದ್ರೆ ಏನಾಗುತ್ತೆ ಎಂದು ಎಲ್ಲರಿಗೂ ಗೊತ್ತಾಗಿದೆ. ನನಗೆ ಒಂದು ಪಕ್ಷ ಏನು ಮಾಡಿದೆ ಅಂತಾ ಎಲ್ಲರಿಗೂ ಗೊತ್ತಿದೆ. ನನಗೆ ಅನ್ಯಾಯ ಮಾಡಿದವರಿಗೆ ಸಮುದಾಯ ಹೇಗೆ ಉತ್ತರ ಕೊಟ್ಟಿದೆ ಅಂತ ರಾಜ್ಯದ ಜನರಿಗೆ ಗೊತ್ತಾಗಿದೆ. ಅವರು ಈಗ ಎಲ್ಲಿ ಬೇಕು ಅಲ್ಲಿ ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಟಿಕೆಟ್ ನೀಡದ್ದಕ್ಕೆ ಬಿಜೆಪಿ ಸೋತಿದೆ ಎಂದು ಶೆಟ್ಟರ್ ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಬಿಗ್ ಪ್ಲ್ಯಾನ್, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಮಹತ್ವದ ಹುದ್ದೆ?

ಬಣಜಿಗ ಸಮುದಾಯ ಕರ್ನಾಟಕ ರಾಜ್ಯಕ್ಕೆ ಏಳು ಮುಖ್ಯಮಂತ್ರಿಗಳನ್ನು ನೀಡಿದೆ. ಅವಮಾನ ಆದರೆ ಹೇಗೆ ಉತ್ತರ ಕೊಡಬೇಕು ಎಂಬುದನ್ನು ಕೂಡ ಈ ಸಮುದಾಯ ತೋರಿಸಿದ್ದಾರೆ ಎಂದು ಶೆಟ್ಟರ್ ಅವರು ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದರು.

ವಿಧಾನಸಭೆ ಚುನಾವಣೆ ಸಮಯದಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಹಾಗೂ ಪಕ್ಷ ನಡೆಸಿಕೊಂಡ ರೀತಿಯಿಂದ ಅಸಮಾಧನಗೊಂಡ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಅವರು ಸೋತರೂ ಬಿಜೆಪಿಯ ಲಿಂಗಾಯತ ಸಮುದಾಯದ ಮತಬ್ಯಾಂಕ್​ಗೆ ಹೊಡೆತ ಬಿದ್ದಿತ್ತು. ಪರಿಣಾಮ ಹಲವೆಡೆ ಬಿಜೆಪಿ ನಾಯಕರು ಸೋಲು ಅನುಭವಿಸುವಂತಾಗಿತ್ತು.

ಸದ್ಯ ಶೆಟ್ಟರ್ ಅವರು ಅವಕಾಶ ಸಿಕ್ಕಾಗೆಲ್ಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಶೆಟ್ಟರ್ ಅವರಿಗೆ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿತು. ಅದರಂತೆ, ಅವಿರೋಧವಾಗಿ ಆಯ್ಕೆಯೂ ಆಗಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ