ಶಾಂತಿಯ ತೋಟದಲ್ಲಿ ದ್ವೇಷದ ಮಾರುಕಟ್ಟೆ ಉದ್ಘಾಟನೆ ಮಾಡಿ ಹೋದ ರಾಹುಲ್ ಗಾಂಧಿ: ಬಿಜೆಪಿ ವಾಗ್ದಾಳಿ
ಜೈ ಶ್ರೀರಾಮ್ ಘೋಷಣೆ ಕೂಗಿದವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ. ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಂತೆಯೇ ಹಿಂದೂ ಯುವಕರ ಮೇಲೆ ಹಲ್ಲೆ ಆಗಿದೆ ಎಂದು ಟೀಕಿಸಿದೆ.
ಬೆಂಗಳೂರು, ಏಪ್ರಿಲ್ 18: ಬೆಂಗಳೂರಿನಲ್ಲಿ ರಾಮನವಮಿ (Ram Navami) ಮುಗಿಸಿ ತೆರಳುತ್ತಿದ್ದ ಯುವಕರು ‘ಜೈ ಶ್ರೀರಾಮ್’ (Jai Sri Ram) ಎಂದಿದ್ದಕ್ಕೆ ಯುವಕರ ಗುಂಪೊಂದು ಅಡ್ಡಗಟ್ಟಿ ಹಲ್ಲೆ ನಡೆಸಲು ಮುಂದಾಗಿರುವ ವಿಚಾರವಾಗಿ ರಾಜ್ಯ ಕಾಂಗ್ರೆಸ್ (Congress) ಸರ್ಕಾರವನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಬಿಜೆಪಿ (BJP), ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕದಲ್ಲಿ ದ್ವೇಷದ ಮಾರುಕಟ್ಟೆ ಉದ್ಘಾಟನೆ ಮಾಡಿ ಹೋದ ರಾಹುಲ್ ಗಾಂಧಿ (Rahul Gandhi) ಎಂದು ಟೀಕಿಸಿದೆ.
‘ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕದಲ್ಲಿ “ದ್ವೇಷದ ಮಾರುಕಟ್ಟೆ” ಉದ್ಘಾಟನೆ ಮಾಡಿ ಹೋಗಿದ್ದ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಬರುತ್ತಿದ್ದಂತೆ ಹಿಂದೂ ಯುವಕರ ಮೇಲೆ ಹಲ್ಲೆ ಆಗಿದೆ. ರಾಮ ನವಮಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಬೆಂಗಳೂರಿನ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಬಳಿ ಮತಾಂಧ ಪುಂಡರು ಅವಾಚ್ಯ ಪದಗಳಿಂದ ನಿಂದಿಸಿ ಓಡಿ ಹೋಗಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಮತಾಂಧ ಶಕ್ತಿಗಳ ಕೈಗೆ ಕೊಟ್ಟು ಸುಳ್ಳು ಸುದ್ದಿ ಹರಡುವುದರಲ್ಲಿ ನಿರತವಾಗಿದೆ’ ಎಂದು ಬಿಜೆಪಿ ಕಿಡಿ ಕಾರಿದೆ.
ರಾಹುಲ್ ಗಾಂಧಿ ಬುಧವಾರ ರಾಜ್ಯಕ್ಕೆ ಆಗಮಿಸಿ ಮಂಡ್ಯ ಮತ್ತು ಕೋಲಾರದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ವಾಪಸಾಗಿದ್ದಾರೆ.
ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಬಳಿ ನಡೆದಿದ್ದೇನು?
ರಾಮನವಮಿ ಕಾರ್ಯಕ್ರಮ ಮುಗಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದ ಯುವಕರನ್ನು ಅಡ್ಡಗಟ್ಟಿದ ಯುವಕರ ತಂಡವೊಂದು, ‘ಜೈ ಶ್ರೀರಾಮ್ ಎಂದು ಹೇಳಬೇಕಾ, ಜೈ ಶ್ರೀ ರಾಮ್ ಇಲ್ಲ. ಓನ್ಲೀ ಅಲ್ಲಾ ಹು ಅಕ್ಬರ್’ ಎಂದು ಹೇಳಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿತ್ತು. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಜೈ ಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ: ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಆರೋಪಿಗಳು
ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿಗಳು, ಯಾವುದೇ ಪೂರ್ವ ನಿರ್ಧಾರಿತ ಸಂಚು ಹೂಡಿರಲಿಲ್ಲ. ಹಲ್ಲೆ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಹೇಳಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಾಲ್ವರ ಪೈಕಿ ಇಬ್ಬರು ಅಪ್ರಾಪ್ತರು ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ