ಯದುವೀರ್ ವಿರುದ್ಧ ಒಕ್ಕಲಿಗ ಅಸ್ತ್ರ ಸಕ್ಸಸ್: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವುದಾಗಿ ಘೋಷಿಸಿದ ಸಮುದಾಯ
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಬಿರು ಬಿಸಿಲು ಲೆಕ್ಕಿಸಿದೇ ರಾಜಕೀಯ ನಾಯಕರು ಹಳ್ಳಿ-ಹಳ್ಳಿಗಳನ್ನು ಸುತ್ತುತ್ತಿದ್ದಾರೆ. ಅದರಲ್ಲೂ ಈ ಬಾರಿ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರಗಳಾದ ಮೈಸೂರು-ಕೊಡಗು ಮತ್ತು ಚಾಮರಾನಗರ ಲೋಕಸಭಾ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಗೆಲುವಿಗಾಗಿ ನಾನಾ ತಂತ್ರಗಳನ್ನು ರೂಪಿಸಿದ್ದಾರೆ. ಮೈಸೂರು ಭಾಗದಲ್ಲಿ ಒಕ್ಕಲಿಗೆ ಬಾಹುಳ್ಯದ ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಜಾಡು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಒಕ್ಕಲಿಗ ಅಸ್ತ್ರ ಪ್ರಯೋಗಿಸಿದ್ದು, ಇದೀಗ ಅದು ಸಕ್ಸಸ್ ಆಗಿದೆ.
ಮೈಸೂರು, (ಏಪ್ರಿಲ್ 18): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರು-ಕೊಡಗು ಲೋಕಸಭಾ(Mysuru Loksabha) ಕ್ಷೇತ್ರದಲ್ಲಿ ಹೂಡಿದ್ದ ಒಕ್ಕಲಿಗ ಅಸ್ತ್ರ ಪ್ರಯೋಗ ಯಶಸ್ವಿಯಾಗಿದೆ. ಹೌದು…ಹಾಲಿ ಸಂಸದ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದ ಪ್ರತಾಪ್ ಸಿಂಹ (Pratap Simha)) ಅವರನ್ನು ಬಿಟ್ಟು ಮೈಸೂರು (Mysuru) ರಾಜ ವಂಶಸ್ಥ ಯದುವೀರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದೀಗ ಅದು ಬಿಜೆಪಿಗೆ ತಿರುಗುಬಾಣವಾಗಿದೆ. ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ಒಕ್ಕಲಿಗ ಸಮುದಾಯದ(okkaliga community) ಅಸಮಾಧಾನಕ್ಕೆ ಕಾರಣವಾಗಿದ್ದು, ಇದೀಗ ಮೈಸೂರಿನಲ್ಲಿ ಒಕ್ಕಲಿಗ ಸಮುದಾಯ ಕಾಂಗ್ರೆಸ್ (Congress) ಅಭ್ಯರ್ಥಿಗೆ ಬೆಂಬಲಿಸುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ.
ಈ ಬಗ್ಗೆ ಇಂದು (ಏಪ್ರಿಲ್ 18) ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಈ ಬಾರಿ ನಾವು ಮೈಸೂರಿನ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರನ್ನ ಬೆಂಬಲಿಸುತ್ತೇನೆ. ಒಕ್ಕಲಿಗರು ಎನ್ನುವ ಕಾರಣಕ್ಕೆ ಮೈಸೂರಿನಲ್ಲಿ ಬಿಜೆಪಿ ಪ್ರತಾಪ್ ಸಿಂಹೆಗೆ ಟಿಕೆಟ್ ತಪ್ಪಿಸಿದೆ. ಲಕ್ಷ್ಮಣ್ ಅವರ ಒಕ್ಕಲಿಗರಲ್ಲ ಎಂದು ಕೆಲವರು ಆರೋಪ ಮಾಡಿದ್ರು. ಲಕ್ಷ್ಮಣ್ ಅವರು ಒಕ್ಕಲಿಗರು, ಅವರು ಒಕ್ಕಲಿಗರ ಸಂಘದಿಂದಲು ಸ್ಪರ್ಧೆ ಮಾಡಿದ್ದಾರೆ. ಒಕ್ಕಲಿಗರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಯಾವುದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ. ಲಕ್ಷ್ಮಣ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಬೆಂಬಲಿಸುತ್ತಿಲ್ಲ. ಪಕ್ಷಾತೀತವಾಗಿ ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮೊನ್ನೆ ಅಷ್ಟೇ ಸಿಎಂ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಲೋಕಸಭಾ ಪ್ರಚಾರದ ವೇಳೆ ಎನ್ಡಿಎ ಅಭ್ಯರ್ಥಿ ಯದುವೀರ್ ವಿರುದ್ಧ ಒಕ್ಕಲಿಗ ಅಸ್ತ್ರ ಪ್ರಯೋಗಿಸಿದ್ದರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಒಕ್ಕಲಿಗ ಸಮಾಜಕ್ಕೆ ಸೇರಿದವರು ಎಂಬುದನ್ನು ಒತ್ತಿ ಒತ್ತಿ ಹೇಳಿದ್ದರು. ಈ ಮೂಲಕ ಮತದಾರರನ್ನು ಮನವೊಲಿಸಿಕೊಳ್ಳಲು ಒಕ್ಕಲಿಗ ಅಸ್ತ್ರ ಪ್ರಯೋಗಿಸಿದ್ದರು.
ಸಿದ್ದರಾಮಯ್ಯ ಒಕ್ಕಲಿಗ ಕಾರ್ಡ್ ಪ್ರಯೋಗಿಸುತ್ತಿದ್ದಂತೆಯೇ ಎಚ್ಚೆತ್ತ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿ ಒಕ್ಕಲಿಗರಲ್ಲ ಎಂದು ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಲಕ್ಷ್ಮಣ ಅವರು ಒಕ್ಕಲಿಗರಾಗಿ ಹುಟ್ಟಿ ವಿಶ್ವಮಾನರಾಗುವ ಹಾದಿಯಲ್ಲಿ ನಡೆಯುತ್ತಾ ಕುವೆಂಪು ಆಶಯವನ್ನು ಪಾಲಿಸುತ್ತಿದ್ದಾರೆ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಬಿಜೆಪಿ ಮಾಡಿರುವ ನಂಬಿಕೆ ಮತ್ತು ಜನದ್ರೋಹಕ್ಕೆ ಪಾಠ ಕಲಿಸಬೇಕೆಂದು ಕರೆ ನೀಡುವ ಮೂಲಕ ಬಿಜೆಪಿ ತಿರುಗೇಟು ನೀಡಿದ್ದರು.
ಅಲ್ಲದೇ ಈ ಬಗ್ಗೆ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಲಕ್ಷ್ಮಣ ಅವರನ್ನು ಲಕ್ಷ್ಮಣ ಗೌಡ ಎಂದು ಕರೆದಿದ್ದರು. ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಟಿಕೆಟ್ ಸಿಕ್ಕಿ 47 ವರ್ಷಗಳಾಗಿದ್ದವು. ಆದ್ದರಿಂದ ನಾನು ಮತ್ತು ಸಿದ್ದರಾಮಯ್ಯ ಚರ್ಚಿಸಿ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ಹೇಳಿದ್ದರು.
ಇದೀಗ ಅಂತಿಮವಾಗಿ ಮೈಸೂರಿನಲ್ಲಿ ಒಕ್ಕಲಿಗರ ಸಂಘ ತಮ್ಮ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಅವರಿಗೆ ಬೆಂಬಲಿಸಲು ತೀರ್ಮಾನಿಸಿದೆ. ಇದರೊಂದಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೂಡಿದ್ದ ಒಕ್ಕಲಿಗ ಅಸ್ತ್ರ ಯಶಸ್ವಿಯಾದಂತಾಗಿದೆ. ಇನ್ನು ಇದಕ್ಕೆ ಪ್ರತಿಯಾಗಿ ಬಿಜೆಪಿ ಹಾಗೂ ಜೆಡಿಎಸ್ ಯಾವ ತಂತ್ರ ಹೆಣೆಯುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ