BJP Janotsava: ನಮ್ಮದು ಡಬಲ್ ಎಂಜಿನ್ ಸರ್ಕಾರ, ಅವರದು ಡಬಲ್ ಸ್ಟೇರಿಂಗ್ ಪಾರ್ಟಿ; ಡಿಕೆಶಿ ವ್ಯಂಗ್ಯಕ್ಕೆ ಸುಧಾಕರ್ ಟಾಂಗ್
ಒಂದು ವರ್ಷದ ಸಾಧನೆ ಕುರಿತು ಸಿದ್ಧಪಡಿಸಿರುವ ‘ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ’ ಹೆಸರಿನ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಲಿದ್ದಾರೆ.
ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ರಾಜ್ಯ ಸರ್ಕಾರ ಬುಧವಾರ (ಜುಲೈ 27) ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಒಂದು ವರ್ಷದ ಸಾಧನೆ ಕುರಿತು ಸಿದ್ಧಪಡಿಸಿರುವ ‘ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ’ ಹೆಸರಿನ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಲಿದ್ದಾರೆ. ಈ ಪುಸ್ತಕದಲ್ಲಿ ವಿವಿಧ ಇಲಾಖೆಗಳ ಸಾಧನೆಯ ಮಾಹಿತಿ ಇರಲಿದೆ. ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲ ಎಸಿಎಸ್ಗಳು, ಪ್ರಧಾನ ಕಾರ್ಯದರ್ಶಿಗಳು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಡಿಜಿಪಿಗಳು, ಎಡಿಜಿಪಿಗಳು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಈ ಸಂಬಂಧ ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ರವಾನೆಯಾಗಿದೆ.
ಸಮಾವೇಶದ ಸಿದ್ಧತೆ ಪರಿಶೀಲನೆ
ದೊಡ್ಡಬಳ್ಳಾಪುರ ಸಮೀಪದ ರಘುನಾಥಪುರದಲ್ಲಿ ನಾಳೆ ಸಮಾವೇಶದ ಸಿದ್ಧತೆಯನ್ನು ಸಚಿವರು ಪರಿಶೀಲಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಂತೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಮುಖಂಡ ಕೇಶವ ಪ್ರಸಾದ್, ಶಾಸಕ ರಾಜೇಶ್ ಗೌಡ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದರು.
ರಘುನಾಥಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದೆ. ಹೀಗಾಗಿ ಹೈಕಮಾಂಡ್ ಸೂಚನೆ ಮತ್ತು ಕಾರ್ಯಕರ್ತರ ಒತ್ತಾಯದ ಮೆರೆಗೆ ‘ಜನೋತ್ಸವ’ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜನೋತ್ಸವ ಎಂದರೆ ಯಾವುದೇ ಒಬ್ಬ ವ್ಯಕ್ತಿಯ ಉತ್ಸವ ಅಲ್ಲ. ಇದು ಎಲ್ಲ ಜನರ ಉತ್ಸವ. ಜನರಿಂದ ಆಯ್ಕೆಯಾಗಿ ಜನರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರದ ಜನೋತ್ಸವ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಭಾಗದಿಂದ ಜನರು ಬರುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು ಎರಡು ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಹಳೇ ಮೈಸೂರು ಭಾಗದಲ್ಲಿ ನಮ್ಮ ಪಕ್ಷದ ಶಕ್ತಿಯ ಬಗ್ಗೆ ಪ್ರಶ್ನಿಸುವವರಿಗೆ ಉತ್ತರ ನೀಡುವ ಸಮಾವೇಶ ಇದಾಗಲಿದೆ. ಜನಪರ ಕಾಳಜಿ, ಬದ್ಧತೆಯಿಂದ ನಮ್ಮ ಮುಖ್ಯಮಂತ್ರಿ ಕಾಮನ್ಮ್ಯಾನ್ ಎಂದೇ ಪ್ರಸಿದ್ಧರಾಗಿದ್ದಾರೆ. ನಮ್ಮ ಪ್ರಣಾಳಿಕೆಯ ಭಾಗವಾಗಿ ನಮ್ಮ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳನ್ನು ನಾಳೆ ವಿವರಿಸಲಿದ್ದೇವೆ ಎಂದರು.
ಡಬಲ್ ಸ್ಟೇರಿಂಗ್ ಕಾಂಗ್ರೆಸ್
ನಮ್ಮದು ಡಬಲ್ ಎಂಜಿನ್ ಸರ್ಕಾರವಾಗಿದ್ದರೆ ಕಾಂಗ್ರೆಸ್ದು ಡಬಲ್ ಸ್ಟೇರಿಂಗ್ ಗೊಂದಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಸ್ಟೇರಿಂಗ್ ಅನ್ನು ಒಂದೊಂದು ಕಡೆ ಎಳೆಯುತ್ತಿದ್ದಾರೆ. ಆ ಪಕ್ಷವನ್ನು ಯಾರೂ ಇಷ್ಟಪಡುವುದಿಲ್ಲ. ಜನೋತ್ಸವ ಸಮಾವೇಶ ಎನ್ನುವುದು 2023ರ ಚುನಾವಣೆಯ ದಿಕ್ಸೂಚಿ ಸಮಾವೇಶವಾಗಲಿದೆ ಎಂದು ಸಚಿವ ಸುಧಾಕರ್ ಹೇಳಿದರು.
ಜನೋತ್ಸವ ಕಾರ್ಯಕ್ರಮವನ್ನ ಕೆಪಿಸಿಸಿ ಅಧ್ಯಕ್ಷರು ಭ್ರಷ್ಟೋತ್ಸವ ಎಂದು ಹೇಳಿದ್ದು ಗಮನಿಸಿದ್ದೇನೆ. 2013ರ ಸರ್ಕಾರದಲ್ಲಿ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎನ್ನುವುದನ್ನು ಅವರು ಮೊದಲು ಸ್ವಷ್ಟಪಡಿಸಲಿ. ನೀರಾವರಿ, ಇಂಧನ… ಹೀಗೆ ಯಾವ ಇಲಾಖೆಯೂ ಅವರ ಕಾಲದಲ್ಲಿ ಭ್ರಷ್ಟಾಚಾರದಿಂದ ಹೊರತಾಗಿರಲಿಲ್ಲ. ಡಿನೋಟಿಫಿಕೇಷನ್ಗೆ ‘ರಿಡೋ’ ಅನ್ನೂ ಪದವನ್ನು ಬಹಳ ಬುದ್ಧಿವಂತಿಕೆಯಿಂದ ಮಾಡಿದ್ದಿರಿ. ಅದಕ್ಕಾಗಿಯೇ ಲೋಕಾಯುಕ್ತದ ಬಲ ಕಡಿಮೆ ಮಾಡಿ ಎಸಿಬಿ ಆರಂಭಿಸಿದಿರಿ. ನಿಮಗೆ ಬೇಕಾದ ರೀತಿಯಲ್ಲಿ ರಿಪೋರ್ಟ್ ಪಡೆದುಕೊಂಡಿರಿ ಎಂದು ಟೀಕಿಸದರು. ದಾವಣಗೆರೆಯಲ್ಲಿ ನಡೆಯುತ್ತಿರುವ ‘ನೊವೋತ್ಸವ’ದಿಂದ ಬೇಸರಗೊಂಡಿರುವ ನೀವು ಈ ರೀತಿ ಮಾತನಾಡುತ್ತಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.
Published On - 2:31 pm, Wed, 27 July 22