ಪ್ರತಿಭಟನೆ ವೇಳೆ ಯೂತ್ ಕಾಂಗ್ರೆಸ್ ನಾಯಕ ಬಿವಿ ಶ್ರೀನಿವಾಸ್ ಕೂದಲು ಹಿಡಿದು ಎಳೆದಾಡಿದ ದೆಹಲಿ ಪೊಲೀಸ್; ವಿಡಿಯೊ ನೋಡಿ
Congress Leader BV Srinivas ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರ ದಬ್ಬಾಳಿಕೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಕೂದಲು ಹಿಡಿದೆಳೆದು ವಾಹನದೊಳಗೆ ತಳ್ಳಿದ ಪೊಲೀಸ್.
ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಜಾರಿ ನಿರ್ದೇಶನಾಲಯ ಪ್ರಶ್ನಿಸಿದ್ದನ್ನು ವಿರೋಧಿಸಿ ಮತ್ತು ದೇಶದಲ್ಲಿನ ಬೆಲೆ ಏರಿಕೆ, ಜಿಎಸ್‌ಟಿ ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ದೆಹಲಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಈ ವೇಳೆ ಯೂತ್ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್ (BV Srinivas) ಅವರ ಕೂದಲನ್ನು ಪೊಲೀಸರು ಎಳೆದಾಡುತ್ತಿರುವ ವಿಡಿಯೊವೊಂದನ್ನು ಎಎನ್ಐ ಸುದ್ದಿಸಂಸ್ಥೆ ಟ್ವೀಟಿಸಿದೆ.
#WATCH | Delhi Police personnel seen pulling the hair of National President of Indian Youth Congress, Srinivas BV, and manhandling him earlier during the party’s protest.
(Source: Congress) pic.twitter.com/ODyN1YjERG
— ANI (@ANI) July 26, 2022
“ಅವರು ನನಗೆ ಹೊಡೆದರು. ಅವರು ನನ್ನ ಕೂದಲನ್ನು ಎಳೆದರು ಎಂದು ಶ್ರೀನಿವಾಸ್ ಕೂಗಿದ್ದಾರೆ. ಇದಕ್ಕೂ ಮುನ್ನ ಪೊಲೀಸರೊಬ್ಬರು ಅವರ ತಲೆಗೂದಲು ಹಿಡಿದು ಎಳೆದಾಡಿದ್ದರು. ಮತ್ತೊಬ್ಬ ಪೊಲೀಸ್, ಅವರನ್ನು ಬಲವಂತವಾಗಿ ಕಾರಿನೊಳಗೆ ತಳ್ಳುತ್ತಿರುವುದು ಕಂಡುಬಂದಿತು. ಈ ವಿಡಿಯೊವನ್ನು ಹಲವು ಕಾಂಗ್ರೆಸ್ ನಾಯಕರು ಶೇರ್ ಮಾಡಿದ್ದು, ಪ್ರತಿಭಟನಾಕಾರರ ಮೇಲೆ ಕ್ರೂರ ದಬ್ಬಾಳಿಕೆ ಎಂದು ಖಂಡಿಸಿದ್ದಾರೆ.
ನಾವು ಭಯಪಡುವುದಿಲ್ಲ, ತಲೆಬಾಗುವುದಿಲ್ಲ ಎಂಬ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದ ಯುವ ಕಾಂಗ್ರೆಸ್ ಸದಸ್ಯರು, ಸತ್ಯಕ್ಕೆ ಸಾವಿಲ್ಲ ಎಂದು ನೆನಪಿಸಿಕೊಳ್ಳಿ ಎಂದು ರಸ್ತೆಯಲ್ಲೇ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.. ನಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಸೇಡಿನ ರಾಜಕಾರಣದ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆ ಎಂದು ಯುವ ಕಾಂಗ್ರೆಸ್ ಸದಸ್ಯರು ಹೇಳಿದ್ದಾರೆ. ಬಿಜೆಪಿಯು ಸತ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹೆದರುತ್ತದೆ ಎಂದಿದ್ದಾರೆ ಕಾರ್ಯಕರ್ತರು.
ಇದಕ್ಕೂ ಮೊದಲು ದೆಹಲಿ ಪೊಲೀಸರು ಸಂಸತ್ ಬಳಿ ಮತ್ತು 24, ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಪಕ್ಷದ ಕಾರ್ಯಕರ್ತರು ಮತ್ತು ಸಂಸದರನ್ನು ಬಂಧಿಸಿದ್ದಾರೆ. ರಾಹುಲ್ ಗಾಂಧಿ ಕೂಡ ಕೆಲಕಾಲ ರಸ್ತೆಯಲ್ಲೇ ಕುಳಿತಾಗ ಪೊಲೀಸರು ಸುತ್ತುವರಿದಿದ್ದರು. ಆಮೇಲೆ ಅವರನ್ನು ಬಂಧಿಸಲಾಯಿತು.
Published On - 9:09 pm, Tue, 26 July 22