ಸಿಎಂ ಬೊಮ್ಮಾಯಿಯನ್ನು ಶಕುನಿಗೆ ಹೋಲಿಸಿದ ಸುರ್ಜೇವಾಲ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶಕುನಿಗೆ ಹೋಲಿಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಸಿಎಂ ಬೊಮ್ಮಾಯಿಯನ್ನು ಶಕುನಿಗೆ ಹೋಲಿಸಿದ ಸುರ್ಜೇವಾಲ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಛಲವಾದಿ ನಾರಾಯಣಸ್ವಾಮಿ
Follow us
|

Updated on: Mar 28, 2023 | 9:40 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಶಕುನಿಗೆ ಹೋಲಿಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ ಮಂಗಳವಾರ ತಿಳಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಎರಡು ವಿಚಾರವಾಗಿ ದೂರು ನೀಡಿದ್ದೇನೆ. ಸಿಎಂ ಬೊಮ್ಮಾಯಿ ಅವರನ್ನ ಶಕುನಿಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಯಿಗೂ ಬೀಗ ಇಲ್ಲ, ರಣದೀಪ್​ ಬಾಯಿಗೂ ಬೀಗ ಇಲ್ಲ. ಇಬ್ಬರಿಗೂ ನಾಲಗೆ ಮೇಲೆ ಹಿಡಿತ ಇಲ್ಲ, ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳನ್ನು ಶಕುನಿ ಅಂದರೆ, ನಿಮ್ಮನ್ನು ಶಿಖಂಡಿ ಅನ್ನಬಹುದಲ್ವಾ? ಮೋದಿ ಜಾತಿ ನಿಂದಿಸಿದ್ದಕ್ಕೆ ರಾಹುಲ್ ಗಾಂಧಿ ಅನರ್ಹಗೊಂಡಿದ್ದಾರೆ. ಇದು ನಿಮಗೆ ಪಾಠ ಅನಿಸುವುದಿಲ್ಲವೇ? ಸುರ್ಜೇವಾಲ ಕ್ಷಮೆ ಕೇಳಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಜನರಲ್ಲಿ ಅವಿಶ್ವಾಸ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಆಂಧ್ರದ ತಿರುಪತಿ ತಿರುಮಲದಲ್ಲಿ ಏನಾಗಿದೆ ಅನ್ನೋದು ಅವರಿಗೆ (ಕಾಂಗ್ರೆಸ್) ಗೊತ್ತಿಲ್ಲ. ವಿದೇಶಿ ವಿನಿಮಯ ವಿಚಾರವಾಗಿ ಆರ್​ಬಿಐ ದಂಡ ಹಾಕಿದೆ ಎಂದು ಹೇಳುತ್ತಿದ್ದಾರೆ. ಹಿಂದೂ ದೇಗುಲ ವಿಚಾರ ಬಂದಾಗ ಮೊದಲು ನಿಲ್ಲೋದು ಬಿಜೆಪಿ. ಮೋದಿ ಸರ್ಕಾರ ತಿರುಪತಿ ಮೇಲೆ ದಾಳಿ ನಡೆಸಿದೆ ಅಂದಿದ್ದಾರೆ. ಸುರ್ಜೇವಾಲ ನಮ್ಮ ಪಕ್ಷದ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ನದ್ದು ಶಕುನಿ ಬುದ್ಧಿ; ಬೊಮ್ಮಾಯಿ

ಈ ಮಧ್ಯೆ, ಜನರ ಮಧ್ಯೆ ಜಗಳ ಹಚ್ಚೋ ಶಕುನಿ ಯಾರು? ಅದು ಕಾಂಗ್ರೆಸ್ ಎಂದು ಬಸವರಾಜ ಬೊಮ್ಮಾಯಿ ಈಗಾಗಲೇ ತಿರುಗೇಟು ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಮಾತನಾಡಿದ್ದ ಬೊಮ್ಮಾಯಿ ಕೂಡ ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದರು. ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸದಂತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಂಜಾರ ಸಮುದಾಯದ ಮುಖಂಡರಲ್ಲಿ ನಾನು ವಿನಂತಿ ಮಾಡುತ್ತೇನೆ. ಸದಾಶಿವ ಆಯೋಗ ಶಿಫಾರಸ್ಸು ವರದಿ ನಾವು ಜಾರಿ ಮಾಡಿಲ್ಲ. ಎಸ್​​ಇ ಲಿಸ್ಟ್ ಇಂದು ತೆಗೆಯುತ್ತಾರೆ ಎಂಬ ಆತಂಕ ಅವರಲ್ಲಿದೆ. ಆದ್ರೆ ನಾನೇ ಸ್ವಂತ ಆದೇಶ ಮಾಡಿ ಬೋವಿ, ಲಂಬಾಣಿ, ಕೊರಮ, ಕೊರಚ ಎಲ್ಲ ಕೂಡ ಎಸ್​​ಇ ಲಿಸ್ಟ್ ನಲ್ಲಿ ಇರ್ತವೆ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಆದೇಶ ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಲಾಗಿದೆ. ಮೂರು ಪರ್ಸೆಂಟ್ ಬದಲು ನಾಲ್ಕೂವರೆ ಪರ್ಸೆಂಟ್ ಕೊಟ್ಟಿದ್ದೇವೆ. ಸದಾಶಿವ ಆಯೋಗದ ಕೆಲಸ ಇಲ್ಲ ಅಂತ ನಾವು ತೀರ್ಮಾನ ಸಹ ಮಾಡಿದ್ದೇವೆ. ಬೇಡಿಕೆ ಪ್ರಕಾರ ಮಾಡಿದ್ದೇವೆ. ಯಾವುದೇ ಗೊಂದಲ ಇಲ್ಲ ಸಮುದಾಯದ ಹಿತರಕ್ಷಣೆ ಮಾಡಿದ್ದೇವೆ. ಈಗಾಗಲೇ 2 ಲಕ್ಷದ ಹಕ್ಕು ಪತ್ರಗಳನ್ನ ಲಂಬಾಣಿ ತಾಂಡಾದ ಜನರಿಗೆ ಕೊಟ್ಟು ಆಗಿದೆ. ನಿಮ್ಮ ಪರವಾಗಿ ಇರುವ ಸರ್ಕಾರ ಬಿಜೆಪಿ ಸರ್ಕಾರ. ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದವರು ಯಡಿಯೂರಪ್ಪ ‌ನವರು. ಆ ಭಾಗದ ತಾಂಡಾಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೊಟ್ಟವರು ಯಡಿಯೂರಪ್ಪ ನವರು. ಹಿಂಸೆಗೆ ಅವಕಾಶ ಇಲ್ಲ. ಏನೇ ವಿಷಯ ಇದ್ರೂ ಕೂತು ಮಾತನಾಡಿ ಬಗೆಹರಿಸೋಣ. ಇದರಲ್ಲಿ ಕಾಂಗ್ರೆಸ್ ಪ್ರಚೋದನೆ ಇದೆ. ಸ್ಥಳೀಯ ಕಾಂಗ್ರೆಸ್ ನಾಯಕರ ಪ್ರಚೋದನೆ ಇದೆ. ಸಾಮಾಜಿಕ ನ್ಯಾಯ ನೀಡಿದ ಮೇಲೆ ತಡೆದುಕೊಳ್ಳುಲು ಆಗದೆ ಹಿಂಸೆಗೆ ಪ್ರಚೋದನೆ ಮಾಡಲಾಗಿದೆ ಎಂದು ಬೊಮ್ಮಾಯಿ ಕಿಡಿ ಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ