BS Yediyurappa: ಚುನಾವಣಾ ರಾಜಕೀಯದಿಂದ ನಿವೃತ್ತರಾಗಲು ಯಡಿಯೂರಪ್ಪ ನಿರ್ಧಾರ! ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಬಿಎಸ್‌ವೈ
ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ವಿಜಯೇಂದ್ರಗೆ ಪಕ್ಷದಲ್ಲಿ ಮಹತ್ವದ ಸ್ಥಾನಮಾನ ಸಿಕ್ಕಿಲ್ಲ. ಇದೆಲ್ಲವನ್ನೂ ಅಂದಾಜಿಸಿಯೇ ಬಿ.ಎಸ್.ಯಡಿಯೂರಪ್ಪ ಈ ತೀರ್ಮಾನ ಘೋಷಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ (BS Yediyurappa) ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಲು ( political retirement) ನಿರ್ಧರಿಸಿದ್ದಾರೆ. ಪುತ್ರ ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ (Shikaripura) ಬಿಟ್ಟುಕೊಡಲು ಸಹ ಮುಂದಾಗಿದ್ದಾರೆ. ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ವಿಜಯೇಂದ್ರಗೆ ಪಕ್ಷದಲ್ಲಿ ಮಹತ್ವದ ಸ್ಥಾನಮಾನ ಸಿಕ್ಕಿಲ್ಲ. ಇದೆಲ್ಲವನ್ನೂ ಅಂದಾಜಿಸಿಯೇ ಬಿ.ಎಸ್.ಯಡಿಯೂರಪ್ಪ ಈ ತೀರ್ಮಾನ ಘೋಷಿಸಿದ್ದಾರೆ ಎನ್ನಲಾಗಿದೆ.
2018ರಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ವಿಜಯೇಂದ್ರ ಪ್ರಯತ್ನಿಸಿದ್ದರಾದರೂ ಕಡೇಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿತ್ತು. ವರಿಷ್ಠರು, ವಿಜಯೇಂದ್ರಗೆ ಕೇವಲ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಿದ್ದರು! ಇದೀಗ ಬಿಎಸ್‌ವೈ ಕುಟುಂಬಸ್ಥರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ! ಬಿಎಸ್‌ವೈ ಸಿಎಂ ಆಗಿದ್ದಾಗ ಉಪಚುನಾವಣೆಗಳಲ್ಲಿ ಮಹತ್ವದ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ!
ವಿಜಯೇಂದ್ರ ಪ್ರತಿಕ್ರಿಯೆ: ತಂದೆ ಯಡಿಯೂರಪ್ಪ ಅವರು ತಮಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪುತ್ರ ವಿಜಯೇಂದ್ರ ಅವರು ತಂದೆಯ ಮಾರ್ಗದರ್ಶನ, ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ. ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದು ನನ್ನ ಕರ್ತವ್ಯ. ಹಿಂದಿನಿಂದಲೂ ಅದನ್ನು ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ಶಿಕಾರಿಪುರ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಒತ್ತಡ ಹೇರಿದ್ದರು. ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಮುಖಂಡರು ಒತ್ತಾಯಿಸಿದ್ದರು. ಕ್ಷೇತ್ರದ ಮುಖಂಡರ ಒತ್ತಾಯದಂತೆ ಇಂದು ತೀರ್ಮಾನ ಪ್ರಕಟಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಇದರ ಜೊತೆ ಪಕ್ಷ ಏನು ತೀರ್ಮಾನ ಮಾಡುತ್ತದೆ. ಅದನ್ನು ಅಧರಿಸಿ, ನಾನು ನಿರ್ಧಾರ ಮಾಡ್ತಿನಿ. ಈ ವಿಚಾರದಲ್ಲಿ ನಾನು ತಂದೆ ಮೇಲೆ ಒತ್ತಡ ಹಾಕುವ ಪ್ರಶ್ನೆಯೇ ಉದ್ಭವಿಸಲ್ಲ. ಯಡಿಯೂರಪ್ಪನವರಿಗೆ ನಿವೃತ್ತಿ ಅನ್ನೋದು ಸಂಬಂಧ ಇಲ್ಲ. ಅವರ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದ ಇಲ್ಲ. ಹಿಂದೆ ಕೂಡ ಬಿಜೆಪಿ ಸಂಘಟನೆ ಕೆಲಸ ಮಾಡಿದ್ರು. ಮುಂದೆನೂ ಮಾಡ್ತಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ವೇಳೆ ಹೇಳಿದ್ದರು. ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುತ್ತೇನೆ. ಈ ಬಗ್ಗೆ ವಿಪಕ್ಷಗಳಿಗೆ ಸವಾಲು ಕೂಡ ಹಾಕಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೂಡ ಮಾಡ್ತಾರೆ. ಅಧಿಕಾರಕ್ಕೆ ತರಲು ಶ್ರಮ ಹಾಕ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.
Published On - 2:20 pm, Fri, 22 July 22