ಬೆಳಗಾವಿ ರಾಜಕೀಯದಲ್ಲಿ ಶಿವಾಜಿ ಮೂರ್ತಿ ಸಂಘರ್ಷ, ರಮೇಶ್ ಜಾರಕಿಹಜೊಳಿ ತಂತ್ರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿತಂತ್ರ
ಶಿವಾಜಿ ಮೂರ್ತಿ ಉದ್ಘಾಟನೆ ಕಾರ್ಯಕ್ರಮ ಬೆಳಗಾವಿ ರಾಜಕೀಯದಲ್ಲಿ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು, ಇದೀಗ ಸಾಹುಕಾರ್ ತಂತ್ರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿತಂತ್ರ ಹೆಣೆದಿದ್ದಾರೆ.
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ(Belagavi) ಶಿವಾಜಿ ಮೂರ್ತಿ (shivaji statue) ಉದ್ಘಾಟನೆಗೆ ಮಹಾಯುದ್ಧವೇ ಸ್ಫೋಟವಾಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ(Ramesh Jarkiholi) ನಾನಾ ನೀನಾ ಎನ್ನುವ ಸಮರ ಸಾರಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ನಿರ್ಮಾಣವಾಗಿರುವ ಶಿವಾಜಿ ಮೂರ್ತಿ ಕ್ರೆಡಿಟ್ ತೆಗೆದುಕೊಳ್ಳಲು ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಾಹುಕಾರ್ ನಡುವೆ ಜಿದ್ದಾಜಿದ್ದಿ ಶುರುವಾಗಿದ್ದು, ಅಂತಿಮವಾಗಿ ರಮೇಶ್ ಜಾರಕಿಹೊಳಿ ಜಿಲ್ಲಾಡಳಿತದ ವತಿಯಿಂದ ಉದ್ಘಾಟನೆ ಕಾರ್ಯಕ್ರಮ ನಡೆಯಲಿ ಎಂದು ಹೇಳಿದ್ದರು. ಅದರಂತೆ ಇಂದು(ಮಾರ್ಚ್ 02) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಶಿವಾಜಿ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಸಹ ಸಾಹುಕಾರನ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದಾರೆ.
ಜಾರಕಿಹೊಳಿ ಹೇಳಿದಂತೆ ಜಿಲ್ಲಾಡಳಿತದಿಂದ ಕಾರ್ಯಕ್ರಮ
ಇಂದು ಸರ್ಕಾರದಿಂದ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಬೊಮ್ಮಾಯಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಇದಕ್ಕಾಗಿಯೇ ಇಂದು ಬೆಳಗ್ಗೆ 9.15ಕ್ಕೆ ಬೆಳಗಾವಿ ಸಾಂಬ್ರಾ ಏರ್ಪೋರ್ಟ್ಗೆ ಆಗಮಿಸಲಿರುವ ಬೊಮ್ಮಾಯಿ, ಬಳಿಕ ರಸ್ತೆ ಮಾರ್ಗವಾಗಿ ರಾಜಹಂಸಗಡ ಕೋಟೆಗೆ ಭೇಟಿ ನೀಡಿ ಕೋಟೆ ಅಭಿವೃದ್ಧಿ ಹಾಗೂ 43 ಅಡಿ ಎತ್ತರದ ಬೃಹತ್ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಉದ್ಘಾಟಿಸಲಿದ್ದಾರೆ. ಇದೇ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಆರ್‌ಐಡಿಎಲ್ ಬೆಳಗಾವಿ ಸಹಯೋಗದಲ್ಲಿ 4.5 ಕೋಟೆ ವೆಚ್ಚದಲ್ಲಿ ರಾಜಹಂಸಗಡ ಕೋಟೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಕೋಟೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಕ್ರೆಡಿಟ್ ಫೈಟ್ ನಡೆದಿದೆ.
ರಮೇಶ್ ಜಾರಕಿಹಜೊಳಿ ತಂತ್ರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿತಂತ್ರ
ಅತ್ತ ರಮೇಶ್ ಜಾರಕಿಹೊಳಿ ಜಿಲ್ಲಾಡಳಿತ ವತಿಯಿಂದ ಕಾರ್ಯಕ್ರಮ ಆಯೋಜಿಸಿ ಸಿಎಂ ಬೊಮ್ಮಾಯಿ ಅವರಿಂದ ಶಿವಾಜಿ ಪ್ರತಿಮೆ ಉದ್ಘಾಟನೆ ಮಾಡಿಸುತ್ತಿದ್ದರೆ, ಇತ್ತ ಸಾಹುಕಾರ್ಗೆ ಸೆಡ್ಡು ಹೊಡೆದಿರುವ ಕಾಂಗ್ರೆಸ್ ಶಾಸಕಿ ಹೆಬ್ಬಾಳ್ಕರ್, ಮಾರ್ಚ್ 5ರಂದು ಶಿವಾಜಿ ಪ್ರತಿಮೆ ಉದ್ಘಾಟಿಸ್ತೀನಿ ಎಂದು ಟಕ್ಕರ್ ಕೊಟ್ಟಿದ್ದಾರೆ..
ಹೌದು.. ಮಾ. 5ರಂದು ಮತ್ತೊಮ್ಮೆ 20 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಶಿವಾಜಿ ಮೂರ್ತಿ ಉದ್ಘಾಟನೆಗೆ ಪ್ಲ್ಯಾನ್ ಮಾಡಿದ್ದು, ಈ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಟಕ್ಕರ್ ಕೊಡಲು ತಯಾರಿ ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮರಾಠಿ ಭಾಷಿಕರು ಇದ್ದಾರೆ. ಈ ಹಿನ್ನೆಲೆಯಲ್ಲಿ ಶಿವಾಜಿ ಹೆಸರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಭರ್ಜರಿ ರಾಜಕೀಯ ನಡೆದಿದೆ.
ಒಟ್ಟಿನಲ್ಲಿ ಬೆಳಗಾವಿ ಗ್ರಾಮೀಣ ಮತಭೂಮಿಯಲ್ಲಿ ಶಿವಾಜಿ ಪ್ರತಿಮೆ ಕ್ರೆಡಿಟ್ ವಾರ್ ದೊಡ್ಡ ಸಮರಕ್ಕೆ ಕಾರಣವಾಗಿದ್ದು, ಚುನಾವಣೆಯಲ್ಲಿ ಇಬ್ಬರಲ್ಲಿ ಈ ಮೂರ್ತಿ ಯುದ್ಧ ಯಾರಿಗೆ ವರವಾಗುತ್ತೆ ಎಂದು ಕಾದು ನೋಡಬೇಕು.
ಬೆಳಗಾವಿ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:07 am, Thu, 2 March 23