Karnataka Politics: ಜೆಡಿಎಸ್ಗೆ ತಿರುಗುಬಾಣವಾದ ಇಬ್ರಾಹಿಂ ಆರೋಪ, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಸಿಟಿ ರವಿ
ಟಿಪ್ಪು, ಬಾಬರ್, ಘಜ್ನಿ ಮೊಹಮದ್, ಘೋರಿ ಮೊಹಮದ್ನನ್ನು ಟೀಕೆ ಮಾಡಿದರೆ ಸಿದ್ದರಾಮಯ್ಯ ಯಾಕೆ ಎದೆ ಬಡಿದುಕೊಳ್ಳಬೇಕು ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಪ್ರಶ್ನಿಸಿದರು.
ಬೆಂಗಳೂರು: ಮುಸ್ಲಿಂ ನಾಯಕ ಮನ್ಸೂರ್ ಖಾನ್ಗೆ (Mansoor Khan) ಮಣೆ ಹಾಕುವ ಮೂಲಕ ಕಾಂಗ್ರೆಸ್ ರಾಜಕೀಯ (Karnataka Politics) ನಡೆಯೊಂದನ್ನು ಮುಂದಿಟ್ಟಿದೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ಬಿಂಬಿಸುವ ಮೂಲಕ ಕಾಂಗ್ರೆಸ್ನಲ್ಲಿದ್ದಾಗ ಸಿ.ಎಂ.ಇಬ್ರಾಹಿಂ ಮಾಡಿದ್ದ ಆರೋಪವನ್ನು ಜೆಡಿಎಸ್ಗೆ ತಿರುಗುಬಾಣವಾಗಿಸಲು ಯತ್ನಿಸುತ್ತಿದೆ. ವಿಧಾನ ಪರಿಷತ್ನಲ್ಲಿ ವಿಪಕ್ಷ ನಾಯಕ ಸ್ಥಾನಮಾನ ಕೈತಪ್ಪಿದ ಹಿನ್ನೆಲೆಯಲ್ಲಿ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆಯಾಗಿದ್ದರು.
ಇದೀಗ ಇಬ್ರಾಹಿಂ ಆರೋಪ ಸುಳ್ಳಾಗಿಸುವಂತೆ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮನ್ಸೂರ್ ಖಾನ್ಗೆ ಟಿಕೆಟ್ ಕೊಟ್ಟಿದೆ. ಮನ್ಸೂರ್ ಅವರ ತಂದೆ ರೆಹಮಾನ್ ಖಾನ್ ರಾಜ್ಯಸಭೆಗೆ ಟಿಕೆಟ್ ಪಡೆಯುವ ರೇಸ್ನಲ್ಲಿದ್ದರು. ಅವರನ್ನು ಸಮಾಧಾನಪಡಿಸಲು ಮನ್ಸೂರ್ಖಾನ್ಗೆ ಟಿಕೆಟ್ ನೀಡಲಾಗಿದೆ.
ಹವಾ ಬದಲಾಗಬಹುದು: ಹೊರಟ್ಟಿ
ಕಾರವಾರ: ಯಾರ ಬಳಿ ದುಡ್ಡು ಹೆಚ್ಚಾಗಿರುತ್ತದೆಯೋ ಅವರು ಆರಿಸಿ ಬರುತ್ತಾರೆ ಎಂದು ಅಂಕೋಲದಲ್ಲಿ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು. ಅಂಕೋಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿಕ್ಷಕರ ಮಾತು ಕೇಳಿ ಬಿಜೆಪಿ ಪಕ್ಷಕ್ಕೆ ಬಂದೆ. ಆಕಸ್ಮಿಕವಾಗಿ ಆದ ಬದಲಾವಣೆಯಿಂದ ನಾನು ಇಲ್ಲಿಗೆ ಬರಬೇಕಾಯಿತು. ಪರಿಸ್ಥಿತಿಗೆ ಬದಲಾವಣೆಗೆ ಹೊಂದಿಕೊಳ್ಳಬೇಕು. ಹಾಗೆ ಆಯಿತು ಬಂದಿದ್ದೇನೆ ಬಂದಮೇಲೆ ಪಕ್ಷದ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದರು.
ಮಳೆಗಾಲದಲ್ಲಿ ಒಂದು ಹವಾ ಇರುತ್ತದೆ, ಬೇಸಿಗೆಯಲ್ಲಿ ಒಂದು ಹವಾ ಇರುತ್ತದೆ. ಹವಾ ಹೇಗಿರುತ್ತೋ ಹಾಗೆ ಹೊಂದಿಕೊಳ್ಳಬೇಕು. ನನಗೆ ಯಾವ ಆಕಾಂಕ್ಷೆ ಇಲ್ಲ. ನನ್ನ ಸೀನಿಯಾರಿಟಿ, ಯೋಗ್ಯತೆ ನೋಡಿ ಏನಾದರೂ ಉಪಯೋಗ ಮಾಡಿಕೊಂಡರೆ ಮಾಡಿಕೊಳ್ಳಲಿ. ಇಲ್ಲದಿದ್ದರೆ ಪ್ರಾಮಾಣಿಕ ಶಾಸಕನಾಗಿ ಕೆಲಸ ಮುಂದುವರಿಸುತ್ತೇನೆ. ಶಿಕ್ಷಣದ ವಿಷಯದಲ್ಲಿ ಯಾವುದೇ ಸರ್ಕಾರ, ಯಾವುದೇ ಪಕ್ಷಗಳು ಹಸ್ತಕ್ಷೇಪ ಮಾಡಬಾರದು. ಅದು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು.
ಯಾರು ಗೆಲ್ತಾರೆ ನೋಡೋಣ: ಸಿಟಿ ರವಿ
ಚಿಕ್ಕಮಗಳೂರು: ರಾಜ್ಯಸಭೆಯ 3ನೇ ಅಭ್ಯರ್ಥಿಗೆ ಹೆಚ್ಚುವರಿಯಾಗಿ 32 ಮತಗಳಿವೆ. ಚುನಾವಣೆ ಎನ್ನುವುದು ಅಂಕಿಸಂಖ್ಯೆಗಳ ಆಟ, ನಂಬರ್ಗೇಮ್. ನಮ್ಮವರು ಬರಬಹುದು, ಬಾರದೇ ಇರಬಹುದು. ನಾವು ನಮ್ಮನ್ನು ಪರೀಕ್ಷೆ ಮಾಡಿಕೊಳ್ಳಲು, ವಿರೋಧಿಗಳು ಮಾತು ಕೊಟ್ಟಂತೆ ನಡೆದುಕೊಳ್ಳುವರೋ ಇಲ್ಲವೋ ಎಂದು ಪರೀಕ್ಷಿಸಲು ನಾವು ಅಭ್ಯರ್ಥಿಯನ್ನು ಹಾಕಿದ್ದೇವೆ. ಅವರು ಮಾತು ಕೊಟ್ಟಂತೆ ನಡೆದುಕೊಂಡರೆ ಗೆಲ್ಲುತ್ತೇವೆ. ನಾನು ಈಗಲೇ ಏನೂ ಹೇಳಲು ಆಗುವುದಿಲ್ಲ. ರಣನೀತಿಯನ್ನು ಮಾಧ್ಯಮದಲ್ಲಿ ಚರ್ಚೆ ಮಾಡಬಾರದು. ಫಲಿತಾಂಶ ಬಂದ ಮೇಲೆ ಯಾರು ಅಡ್ಡ ಮತ ಹಾಕಿದ್ದಾರೆ, ಉದ್ದ ಮತ ಹಾಕಿದ್ದಾರೆ ಗೊತ್ತಾಗುತ್ತದೆ. ನಮಗೆ ಮತ್ತು ಜೆಡಿಎಸ್ಗೆ ತಲಾ 32 ಮತಗಳಿವೆ. ಕಾಂಗ್ರೆಸ್ನವರು ಹೆಚ್ಚುವರಿ ಮತವನ್ನು ಏನೂ ಮಾಡುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಏಕೆ ಎದೆ ಬಡಿದುಕೊಳ್ಳಬೇಕು?
ಟಿಪ್ಪು, ಬಾಬರ್, ಘಜ್ನಿ ಮೊಹಮದ್, ಘೋರಿ ಮೊಹಮದ್ನನ್ನು ಟೀಕೆ ಮಾಡಿದರೆ ಸಿದ್ದರಾಮಯ್ಯ ಯಾಕೆ ಎದೆ ಬಡಿದುಕೊಳ್ಳಬೇಕು ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಪ್ರಶ್ನಿಸಿದರು. ನಮ್ಮ ಮಾತು ಕೇಳಿ ಯಾಕೆ ಸಿದ್ದರಾಮಯ್ಯ ಅವರು ಉರಿ ಹತ್ತಿದಂತೆ ಆಡಬೇಕು. ಆರ್ಎಸ್ಎಸ್ಗೂ ನಮಗೂ ವೈಚಾರಿಕ ಸಂಬಂಧವಿದೆ. ನಮಗೆಲ್ಲ ಆರ್ಎಸ್ಎಸ್ನಿಂದ ಪ್ರೇರಣೆಯಾಗಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಟಿಪ್ಪು, ಘಜ್ನಿ, ಘೋರಿ, ಬಾಬರ್ಗಳಿಂದ ಪ್ರೇರಣೆ ಸಿಕ್ಕಿದೆಯೇ. ನಮಗೆ ಬಸವಣ್ಣ, ನಾರಾಯಣ ಗುರು, ವಿವೇಕಾನಂದ, ರಾಮಕೃಷ್ಣ ಪರಮಹಂಸ, ಕನಕದಾಸರ ಜೊತೆ ಸಾಂಸ್ಕೃತಿಕ ಸಂಬಂಧವಿದೆ ಎಂದು ಹೇಳಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Tue, 31 May 22