Siddaramaiah: ಯಡಿಯೂರಪ್ಪಗೆ ನನ್ನ ಮೇಲೆ ಬಹಳ ಪ್ರೀತಿಯಿದೆ; ಸಿದ್ದರಾಮಯ್ಯ ವ್ಯಂಗ್ಯ
ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ತೀರ್ಮಾನಿಸುವುದು ನನಗೆ ಬಿಟ್ಟ ವಿಚಾರ. ನಂತರ ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ (BS Yediyurappa) ನನ್ನ ಮೇಲೆ ಬಹಳ ಪ್ರೀತಿಯಿದೆ. ನನಗೆ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪಗೆ ನಾನು ಧನ್ಯವಾದ ತಿಳಿಸುತ್ತೇನೆ. ಸಿಎಂ ಸ್ಥಾನದಿಂದ ಇಳಿಸಿದ ಮೇಲೆ ಅವರು ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ (Siddaramaiah) ಬಾದಾಮಿಯಲ್ಲಿ ಸ್ಪರ್ಧಿಸದ ವಿಚಾರವಾಗಿ ಯಡಿಯೂರಪ್ಪ ಬುಧವಾರ ವಿಧಾನಸಭೆಯಲ್ಲಿ ಉಲ್ಲೇಖಿಸಿದ್ದರು. ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಕ್ಷೇತ್ರ ಬದಲಾಯಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಎಸ್ವೈಗೆ ದೇವರು ಆಯುಷ್ಯ, ಆರೋಗ್ಯ ಕೊಡಲೆಂದು ಪ್ರಾರ್ಥಿಸುತ್ತೇನೆ. ನಾನು ಬಾದಾಮಿ ಕ್ಷೇತ್ರದಿಂದ ಗೆಲ್ಲುವುದಿಲ್ಲ ಎಂದೇನಿಲ್ಲ. ಸ್ಪರ್ಧಿಸಿದರೆ ಗೆದ್ದೇ ಗೆಲ್ಲುತ್ತೇನೆ. ಬಾದಾಮಿ ಕ್ಷೇತ್ರದಲ್ಲಿ ನಾನು ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತೇನೆ. 5 ವರ್ಷ ಶಾಸಕನಾಗಿ ಕ್ಷೇತ್ರದ ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದೇನೆ. ಹೀಗಾಗಿ ಬಾದಾಮಿ ಜನರಿಗೆ ದ್ರೋಹ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ತೀರ್ಮಾನಿಸುವುದು ನನಗೆ ಬಿಟ್ಟ ವಿಚಾರ. ನಂತರ ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಬುಧವಾರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ವಿಧಾನಸಭೆಯಲ್ಲಿದು ನನ್ನ ಕೊನೆಯ ಭಾಷಣ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇನ್ನೆಂದೂ ವಿಧಾನಸಭೆ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದರು. ನಂತರ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯಗೆ ಬಾದಾಮಿಯಲ್ಲಿ ಸ್ಪರ್ಧಿಸಿದರೆ ಗೆಲ್ಲುತ್ತೇನೆ ಎಂಬ ಧೈರ್ಯವಿಲ್ಲ. ಹೀಗಾಗಿ ಕೋಲಾರದತ್ತ ಮುಖ ಮಾಡಿದ್ದಾರೆ. ತಾವು ಪ್ರತಿನಿಧಿಸಿದ ಕ್ಷೇತ್ರದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದರೆ ಯಾಕೆ ಕ್ಷೇತ್ರ ಬದಲಾಯಿಸಬೇಕು? ಸಿದ್ದರಾಮಯ್ಯ ಅವರು ಬಾದಾಮಿಯಿಂದಲೇ ಸ್ಪರ್ಧಿಸಲಿ ಎಂದು ಬಿಎಸ್ವೈ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Thu, 23 February 23