AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಮ್ಮಾಯಿ ಕಣ್ಣುಬಿಟ್ಟು ನೋಡಲು ಇನ್ನೆಷ್ಟು ಹೆಣ ಬೀಳಬೇಕು; ಸಿದ್ದರಾಮಯ್ಯ ಪ್ರಶ್ನೆ

ಕೋಮುಗಲಭೆ ನಡೆದು ಕೊಲೆಯಾದರೆ ಗಂಟೆಯೊಳಗೆ ಹೆಣದ ಸುತ್ತ ನೊಣದಂತೆ ಹೋಗಿ ಕೂರುವ ಬಿಜೆಪಿ ಸರ್ಕಾರಕ್ಕೆ, ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೀವಗಳು ಅಮೂಲ್ಯ ಅನ್ನಿಸುವುದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬೊಮ್ಮಾಯಿ ಕಣ್ಣುಬಿಟ್ಟು ನೋಡಲು ಇನ್ನೆಷ್ಟು ಹೆಣ ಬೀಳಬೇಕು; ಸಿದ್ದರಾಮಯ್ಯ ಪ್ರಶ್ನೆ
ಸಿದ್ದರಾಮಯ್ಯ
Ganapathi Sharma
|

Updated on: Feb 25, 2023 | 12:28 PM

Share

ಬೆಂಗಳೂರು: ಅನುದಾನಿತ ಶಾಲಾ-ಕಾಲೇಜು ಶಿಕ್ಷಕರ ಸಂಘದಿಂದ ಮುಷ್ಕರದಲ್ಲಿ ಭಾಗಿಯಾಗಿದ್ದ ನಿವೃತ್ತ ಶಿಕ್ಷಕರಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಸರಣಿ ಟ್ವೀಟ್ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಣ್ಣು ಬಿಟ್ಟು ನೋಡಲು ಇನ್ನೆಷ್ಟು ಹೆಣ ಬೀಳಬೇಕು ಎಂದು ಪ್ರಶ್ನಿಸಿದ್ದಾರೆ. ಪಿಂಚಣಿಗಾಗಿ ಮುಷ್ಕರದಲ್ಲಿ ತೊಡಗಿದ್ದ ಬಾಗಲಕೋಟೆ ಮೂಲದ ಶಿಕ್ಷಕ ಸಿದ್ದಯ್ಯ ಹಿರೇಮಠ ಮತ್ತು ರಾಯಚೂರು ಜಿಲ್ಲೆ ಸಿಂಧನೂರು ಮೂಲಕ ಶಂಕರಪ್ಪ ಬೋರಡ್ಡಿ ಅವರು ಸರ್ಕಾರ ತಮ್ಮ ಹೋರಾಟಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ಸರ್ಕಾರಿ ಕೊಲೆಗಳು ಅನ್ನದೆ ಬೇರೇನು ಹೇಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಕಳೆದ 141 ದಿನಗಳಿಂದ ಫ್ರೀಡಂ ಪಾರ್ಕ್​​ನಲ್ಲಿ ಮುಷ್ಕರ ನಿರತರಾಗಿರುವ ಅನುದಾನಿತ ಶಾಲಾ ಶಿಕ್ಷಕರ ಗೋಳು ಕೇಳುವವರಿಲ್ಲ. ಶಿಕ್ಷಕರು ಕೇಳುತ್ತಿರುವುದು ತಮ್ಮ ಹಕ್ಕಿನ ಪಿಂಚಣಿಯನ್ನು ಎಂಬ ಕನಿಷ್ಠ ಜ್ಞಾನವಾದರೂ ಬಿಜೆಪಿ ಸರ್ಕಾರಕ್ಕೆ ಬೇಡವೇ? ಅನುದಾನಿತ ಶಾಲಾ ಶಿಕ್ಷಕರು ಪ್ರತಿಭಟನೆ ಆರಂಭಿಸಿ 141 ದಿನಗಳು ಕಳೆದರೂ ಇನ್ನು ಈ ವಿಚಾರ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಇಷ್ಟು ದಿನ ಕೋಮಾದಲ್ಲಿತ್ತು ಎಂಬುದನ್ನು ಸ್ವತಃ ಒಪ್ಪಿಕೊಂಡಿದೆ. ಸದಾ ಕಾಲ ಕಿವಿಯಲ್ಲಿ ಕಮಿಷನ್ ಸದ್ದು ಗುಂಯ್​ಗುಡುವಾಗ ಬಡವರ ಕೂಗು ಕೇಳುವುದಾದರೂ ಹೇಗೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಕೋಮುಗಲಭೆ ನಡೆದು ಕೊಲೆಯಾದರೆ ಗಂಟೆಯೊಳಗೆ ಹೆಣದ ಸುತ್ತ ನೊಣದಂತೆ ಹೋಗಿ ಕೂರುವ ಬಿಜೆಪಿ ಸರ್ಕಾರಕ್ಕೆ, ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೀವಗಳು ಅಮೂಲ್ಯ ಅನ್ನಿಸುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಿಷ ಸೇವಿಸಿದ್ದ ನಿವೃತ್ತ ಶಿಕ್ಷಕ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು

ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ ಮುಷ್ಕರದಲ್ಲಿ ತೊಡಗಿರುವ ಅನುದಾನಿತ ಶಾಲಾ ಶಿಕ್ಷಕರನ್ನು ಕರೆದು ಬಿಜೆಪಿ ಸರ್ಕಾರ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ತಕ್ಷಣ ಈಡೇರಿಸುವ ಕೆಲಸ ಮಾಡಬೇಕು. ಈಗಾಗಲೇ ಪ್ರಾಣ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದು ಮತ್ತೊಂದು ಟ್ವೀಟ್​ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ