ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ನಡುವಿನ ಒಳಜಗಳಕ್ಕೆ ರಾಹುಲ್ ಸಂಧಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಡಿಕೆಶಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಸ್ಥಾನ ಸಿಗದಿದ್ದಾಗಲೇ ನಾನು ಉಸಿರು ಎತ್ತಿಲ್ಲ. ನನ್ನಂತ ನಿಷ್ಠಾವಂತ ಕಾರ್ಯಕರ್ತರನ್ನ ತೋರಿಸಿ ನೋಡೋಣ. ನಮ್ಮ ಸರ್ಕಾರ ಬಂದಾಗ ನನ್ನನ್ನು ಮಂತ್ರಿ ಮಾಡಿಲ್ಲ. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಆಗ ಪ್ರಚಾರ ಸಮಿತಿ ಅಧ್ಯಕ್ಷನಾಗಿ ನಾನು ಕೆಲಸ ಮಾಡಿದ್ದೀನಿ. ಪಕ್ಷ ಅಧಿಕಾರಕ್ಕೆ ಬರದಿದ್ದರೂ ವಿಪಕ್ಷ ನಾಯಕರನ್ನಾಗಿ ಮಾಡಿದ್ದೇವೆ. ನಮಗೆ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಎಂದು ಹೇಳಿದರು.
ವ್ಯಕ್ತಿಪೂಜೆಗೆ ಗೌರವ ಕೊಡಲ್ಲ, ಪಕ್ಷದ ಪೂಜೆಗೆ ಗೌರವ ಕೊಡುತ್ತೇವೆಂದು ಮಾತನಾಡಿದ ಶಿವಕುಮಾರ್, ನನಗೆ ಪಕ್ಷವೇ ಮುಖ್ಯ ಎಂದಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ 2023ರ ಚುನಾವಣೆ ಎದುರಿಸಲಿದ್ದೇವೆ. ಕಾಂಗ್ರೆಸ್ನ ಎಲ್ಲ ನಾಯಕರು ಸೇರಿ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಜಯಂತಿ ನಡೆಸುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಡಿಕೆಶಿ, ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬ ಪ್ರಯುಕ್ತ ಮಾಡ್ತಿದ್ದಾರೆ. ಕಾರ್ಯಕರ್ತರು, ಅಭಿಮಾನಿಗಳು ಸೇರಿಕೊಂಡು ಮಾಡ್ತಿದ್ದಾರೆ. ನನ್ನ ಹುಟ್ಟುಹಬ್ಬ ಕೇದಾರನಾಥ ಸನ್ನಿಧಿಯಲ್ಲಿ ಆಚರಿಸಿಕೊಂಡೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಣೆ ಮಾಡ್ತಾರೆ ಎಂದರು.
ಇದನ್ನೂ ಓದಿ: Viral Video: ಸೂಪರ್ಫಾಸ್ಟ್ ವೇಗದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವ ಉದ್ಯೋಗಿ, ಅಸಲಿ ಬುಲೆಟ್ ಟ್ರೇನ್ ಎಂದ ಇಂಟರ್ನೆಟ್
ಆ ವಿಚಾರವನ್ನ ಅಲ್ಲಿಗೆ ಬಿಡೋಣ:
ಪಕ್ಷಕ್ಕೂ ರಾಜಣ್ಣನವರ ಹೇಳಿಕೆಗೆ ಯಾವುದೇ ಸಂಬಂಧವಿಲ್ಲ. ಕ್ಷಮೆ ಕೇಳಬೇಕು ಎಂದು ವರಿಷ್ಠರು, ನಾನು ಸೂಚನೆ ನೀಡಿದ್ದೇವೆ. ರಾಜಣ್ಣನವರು ಗೌರವದಿಂದ ತಪ್ಪಾಯಿತು ಅಂತ ಹೇಳಿದ್ದಾರೆ. ಆ ವಿಚಾರವನ್ನ ಅಲ್ಲಿಗೆ ಬಿಡೋಣ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್‌ಗೆ 70 ಸೀಟು ಬರಲ್ಲ ಎಂಬ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಕುಮಾರ್, ಸಮೀಕ್ಷೆ ಬಗ್ಗೆ ನಾನು ಮಾತನಾಡಲ್ಲ. ನಾನು 9 ಎಲೆಕ್ಷನ್ ನಿಂತಿರೋನು. ಸಮೀಕ್ಷೆನೆ ಸರಿ ಅಂತ ನಾನೇನು ಹೇಳಲ್ಲ. ಮಾಧ್ಯಮದವರು ಕೂಡ ಲೆಕ್ಕಾಚಾರ ಹಾಕಿ ಚುನಾವಣೆ ಸಮೀಕ್ಷೆ ಮಾಡ್ತಾರೆ. ಕೆಲವೊಂದು ಸಮೀಕ್ಷೆಯಂತೆ ನಡೆಯಲ್ಲ. ಆದ್ರೆ ಈಗ ಕಾಂಗ್ರೆಸ್‌ಗೆ ಜನ ಮತ ಹಾಕ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಜನರ ಒಲವು ನಮ್ಮ ಪಕ್ಷದ ಕಡೆ:
ಕರ್ನಾಟಕದಲ್ಲಿ ನಾವು ಎರಡ್ಮೂರು ಸಮೀಕ್ಷೆ ಮಾಡಿಸಿದ್ದೇನೆ. ನಮ್ಮ ಹೈಕಮಾಂಡ್ ಕೂಡ ಚುನಾವಣಾ ಸಮೀಕ್ಷೆ ನಡೆಸಿದೆ. ಉಪಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ, ಬಿಜೆಪಿಯೂ ಗೆದ್ದಿತ್ತು. ವಿಧಾನಪರಿಷತ್ ಚುನಾವಣೆಯಲ್ಲೂ ಸಮಾನವಾಗಿ ಗೆದ್ದಿದ್ದೇವೆ. ಶಿಕ್ಷಕರ ಕ್ಷೇತ್ರದಲ್ಲಿ ಯಾವತ್ತು ಗೆದ್ದಿರಲಿಲ್ಲ, ಇವತ್ತು ಗೆದ್ದಿದ್ದೇವೆ. ಶಿಕ್ಷಕರು, ಪದವೀಧರರು ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಿದ್ದಾರೆ. ಕಾಂಗ್ರೆಸ್‌ಗೆ ವಿದ್ಯಾವಂತರು, ಪ್ರಜ್ಞಾವಂತರು ಮತ ಹಾಕಿದ್ದಾರೆ. ಸಮೀಕ್ಷೆ ತೀರ್ಮಾನ ಸರಿ ಎಂದು ನಾನು ಹೇಳುವುದಿಲ್ಲ. ಆದರೆ ಲೆಕ್ಕಾಚಾರ ಇಟ್ಕೊಂಡೇ ಸಮೀಕ್ಷೆಗಳು ನಡೆಯುತ್ತೆ. ಕೆಲವೊಮ್ಮೆ ಸಮೀಕ್ಷೆ ನಿಜವಾಗುತ್ತೆ ಮತ್ತೊಮ್ಮೆ ಸುಳ್ಳಾಗಬಹುದು. ಆದರೂ ಜನರ ಒಲವು ನಮ್ಮ ಪಕ್ಷದ ಕಡೆ ಇರುವುದು ನಿಜ ಎಂದು ಶಿವಕುಮಾರ್ ಹೇಳಿದರು.
Published On - 11:26 am, Sun, 3 July 22