ಅಮಿತ್ ಶಾ ಬಗ್ಗೆ ಮಾತನಾಡಿದ್ದಾರೆನ್ನಲಾದ ಆಡಿಯೋ ವೈರಲ್ ಬಗ್ಗೆ ಸ್ಪಷ್ಟನೆ ನೀಡಿದ ಸಿ.ಪಿ.ಯೋಗೇಶ್ವರ್
ಬಿಜೆಪಿ ಎಂಎಲ್ಸಿ ಸಿ.ಪಿ ಯೋಗೇಶ್ವರ್ ಮಾತನಾಡಿರುವ ಎನ್ನಲಾದ ಆಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಸದ್ಯ ಈ ವಿಚಾರವಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಮನಗರ: ಚುನಾವಣೆ ಹೊತ್ತಲ್ಲಿ ಬಿಜೆಪಿ (BJP) ಎಂಎಲ್ಸಿ ಯೋಗೇಶ್ವರ್ (C P Yogeshwar) ಮಾತನಾಡಿರುವ ಎನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಒಂದು ರೀತಿಯಲ್ಲಿ ಸಂಚಲನಕ್ಕೂ ಕಾರಣವಾಗಿತ್ತು. ಸದ್ಯ ಈ ಎಲ್ಲಾ ವಿಚಾರವಾಗಿ ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನಾನು ಅಧಿಕೃತವಾಗಿ ಎಲ್ಲೂ ಮಾತನಾಡಿಲ್ಲ. ಖಾಸಗಿಯಾಗಿ ಮಾತನಾಡಿರುವ ವಿಚಾರ ಇರಬಹುದು. ಅದು ನನ್ನದೇ ವಾಯ್ಸ್ ಎಂಬುದು ಗೊತ್ತಿಲ್ಲ ಎಂದು ಯೋಗೇಶ್ವರ್ ಸ್ಪಷ್ಟನೆ ನೀಡಿದರು.
ಏನೇ ಇದ್ದರೂ ನಾನು ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದ್ದೇನೆ. ಗ್ರಾಮೀಣ ಭಾಷೆಯಲ್ಲಿ ಕೆಲವು ವಿಚಾರಗಳನ್ನು ಮಾತನಾಡಿದ್ದೇನೆ. ನನ್ನ ಮನಸ್ಸಿನಲ್ಲಿ ಪಕ್ಷ ಸಂಘಟನೆ ಮಾಡೋದು ಅಷ್ಟೇ ಇರೋದು. ಆ ದೃಷ್ಟಿಯಲ್ಲಿ ನಾನು ಮಾತನಾಡಿರಬಹುದು ಅಷ್ಟೇ ಎಂದು ಹೇಳಿದರು.
ಬಿಜೆಪಿಗೆ ಬರುವಂತೆ ಸಂಸದೆ ಸುಮಲತಾಗೂ ಮನವಿ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ವರಿಷ್ಠರ ಮಟ್ಟದಲ್ಲಿ ಈ ಬಗ್ಗೆ ಮಾತನಾಡಿದ್ದೇವೆ. ಸುಮಲತಾರನ್ನ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಮನವಿ ಮಾಡಿದ್ದೇವೆ. ಬಿಜೆಪಿಗೆ ಬರುವಂತೆ ಸಂಸದೆ ಸುಮಲತಾಗೂ ಮನವಿ ಮಾಡಿದ್ದೇವೆ. ಕಾಂಗ್ರೆಸ್, ಜೆಡಿಎಸ್ ದ್ವಂದ್ವ ನಿಲುವಿನ ಬಗ್ಗೆ ಸುಮಲತಾಗೂ ಗೊತ್ತಿದೆ. ಬಿಜೆಪಿ ಅವಧಿಯಲ್ಲಿ ಮಂಡ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಜನಾಭಿಪ್ರಾಯವಿಲ್ಲದ ಬಿಜೆಪಿ ಸರ್ಕಾರಕ್ಕೆ ಮುಂದೆ ಅಧಿಕಾರ ಸಿಗಲ್ಲವೆಂದು ಗೊತ್ತಿದೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಗುಡುಗು
ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಏನು ಹೇಳ್ತಾರೋ ಅದೇ ಫೈನಲ್
ಇನ್ನು ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ಸಿಎಂ ಏನು ಹೇಳ್ತಾರೋ ಅದೇ ಫೈನಲ್. ಸಂಕ್ರಾಂತಿ ಹಬ್ಬದ ನಂತರ ಬದಲಾವಣೆ ಮಾಡಬೇಕು ಅಂತಾ ಇತ್ತು. ಸಂಕ್ರಾಂತಿ ನಂತರ ಪ್ರಾಕೃತಿಕವಾಗಿ ಬದಲಾವಣೆ ಆಗೋದು ಸಹಜ. ಸಚಿವ ಸಂಪುಟ ವಿಸ್ತರಣೆ ಮಾಡಲು ಸಿಎಂಗೂ ಕೂಡ ಆಸೆ ಇದೆ. ಪರಿಪೂರ್ಣವಾಗಿ ಸಂಪುಟ ಆಗಿಲ್ಲ ಅನ್ನೋದು ಸಿಎಂಗೂ ಗೊತ್ತಿದೆ. ನೋಡೋಣ ಇದು ಪಕ್ಷದ ವರಿಷ್ಠರಿಗೆ ಬಿಟ್ಟ ತೀರ್ಮಾನ. ಪಕ್ಷದಲ್ಲಿ ಏನಾದರೂ ಒಂದಷ್ಟು ಬದಲಾವಣೆ ಆಗಬೇಕಿದೆ ಎಂದರು.
ಹಳೆ ಮೈಸೂರು ಭಾಗದಲ್ಲಿ ಸಚಿವ ಸ್ಥಾನ ಸಿಕ್ಕರೆ ಪಕ್ಷಕ್ಕೆ ಬಲ
ಹಳೆ ಮೈಸೂರು ಭಾಗದಲ್ಲಿ ಸಚಿವ ಸ್ಥಾನ ಸಿಕ್ಕರೆ ಪಕ್ಷಕ್ಕೆ ಬಲ ವಿಚಾರಕ್ಕೆ, ಪಕ್ಷದಲ್ಲಿ ಎಲ್ಲಾ ವರಿಷ್ಠರಿಗೂ ಮನವಿ ಮಾಡಲಾಗಿದೆ. ಇಷ್ಟು ವರ್ಷಗಳ ಕಾಲ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಪಕ್ಷಕ್ಕೆ ಹಿನ್ನಡೆ ಆಗಿತ್ತು. ಇದೆಲ್ಲ ಪಕ್ಷದ ವರಿಷ್ಠರ ಗಮನಕ್ಕೆ ಹೋಗಿದೆ. ದೀಪದ ಕೆಳಗೆ ಕತ್ತಲು ಎಂಬಂತೆ ನಾವು ಯಾಕೆ ಬದಲಾವಣೆ ಮಾಡಬಾರದು ಎಂದು ಚಿಂತನೆ ಮಾಡಿದ್ದೆವು. ಬೆಂಗಳೂರು ಮತ್ತು ಬೆಂಗಳೂರು ಸುತ್ತ ಯಾಕೆ ಬಿಜೆಪಿ ಬೆಳೆದಿಲ್ಲ ಎಂಬುದರ ಅರಿತು ಪಕ್ಷಕ್ಕೆ ಗೊತ್ತಾಗಿದೆ. ನಾನು ಹತ್ತಾರು ಸಲ ಪಕ್ಷದಲ್ಲಿ ಈ ಬಗ್ಗೆ ಆಕ್ಷೇಪಣೆ ಎತ್ತಿದ್ದೇನೆ. ಹೊಂದಾಣಿಕೆ ರಾಜಕೀಯ ಆಗ್ತಿದೆ ಎಂದು ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಹೊತ್ತು ನೀಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಸೀಟ್ ಗೆಲ್ಲುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: 2023ರ ಚುನಾವಣೆಗೆ ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ: ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿದ ಸಿ.ಪಿ.ಯೋಗೇಶ್ವರ್
ಷಡ್ಯಂತ್ರ ಅನ್ನೋದು ರಾಜಕೀಯದಲ್ಲಿ ಕಾಮನ್
ಯೋಗೆಶ್ವರ್ಗೆ ಸ್ವಪಕ್ಷದಲ್ಲೇ ಷಡ್ಯಂತ್ರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನೋಡ್ರಿ ಇದು ರಾಜಕೀಯ. ಎಲ್ಲಾ ಪಕ್ಷಗಳಲ್ಲೂ ಷಡ್ಯಂತ್ರಗಳು ಇರುತ್ತವೆ. ಚಾಣಕ್ಯನ ಕಾಲದಿಂದಲೂ ಇದೆಲ್ಲವೂ ನಡೆಯುತ್ತಿದೆ. ನಮ್ಮ ಉದ್ದೇಶ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡೋದು ಅಷ್ಟೇ. ಷಡ್ಯಂತ್ರ ಅನ್ನೋದು ರಾಜಕೀಯದಲ್ಲಿ ಕಾಮನ್. ಅದೆಲ್ಲದಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.