ರಾಮನಗರ, ಜೂನ್ 19: ಜೆಡಿಎಸ್ ವರಿಷ್ಠ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumarswamy) ಅವರಿಂದ ತೆರುವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ (Channapatna Assembly Constituency) ನಡೆಯಲಿರುವ ಉಪಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರೇ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ರಾಜ್ಯ ರಾಜಕೀಯ ವಲಯದಿಂದ ಕೇಳಿಬಂದಿವೆ. “ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಅಚ್ಚರಿ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ” ಎಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಅವರು ಪದೆಪದೆ ಹೇಳುತ್ತಿದ್ದರು. ಡಿಕೆ ಸುರೇಶ ಅವರ ಹೇಳಿಕೆಗೆ ಡಿಕೆ ಶಿವಕುಮಾರ್ ಅವರು ಇಂದು (ಜೂ.19) ನೀಡಿರುವ ಹೇಳಿಕೆ ಪುಷ್ಟಿ ನೀಡಿದೆ. ಅಲ್ಲದೆ ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿಯಾಗುವುದರ ಹಿಂದೆ ಕಾರಣಗಳಿವೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಟೆಂಪಲ್ ರನ್ ನಡೆಸಿದರು. ಒಂದೇ ದಿನ 14 ದೇವಾಲಯಗಳಿಗೆ ಭೇಟಿ ನೀಡಿದರು. ದೇವಸ್ಥಾನಗಳಿಗೆ ಭೇಟಿ ನಿಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.
“ಚನ್ನಪಟ್ಟಣ ನನ್ನ ಹೃದಯವಿದ್ದಂತೆ, ಚನ್ನಪಟ್ಟಣವನ್ನು ಪ್ರೀತಿಸ್ತೇನೆ. ಚನ್ನಪಟ್ಟಣ ರಾಜಕೀಯ ಜೀವನ ಕೊಟ್ಟ ಕ್ಷೇತ್ರ. ನಾಲ್ಕು ಬಾರಿ ಅಲ್ಲಿನ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಕಷ್ಟ ಕಾಲದಲ್ಲಿ ಚನ್ನಪಟ್ಟಣ ಜನ ಕೈ ಹಿಡಿದಿದ್ದಾರೆ. ಕನಕಪುರ ಕ್ಷೇತ್ರದಂತೆ ಚನ್ನಪಟ್ಟಣವನ್ನೂ ಅಭಿವೃದ್ಧಿ ಮಾಡುತ್ತೇನೆ” ಎಂದರು.
ಚನ್ನಪಟ್ಟಣದಿಂದ ಸ್ಪರ್ಧಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು “ವಿಧಿಯೇ ಇಲ್ಲ, ಜನರು ಏನು ಹೇಳುತ್ತಾರೆ ಹಾಗೆ ಮಾಡುತ್ತೇನೆ” ಎಂದು ಹೇಳುವ ಮೂಲಕ ಚನ್ನಪಟ್ಣಣ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಸಜ್ಜಾಗಿದ್ದಾರೆ ಎಂಬ ಅನುಮಾನ ಮೂಡಿದೆ.
ಇದನ್ನೂ ಓದಿ: ಇವಿಎಂ ಮಿಷನ್ ಮೇಲಿನ ಅನುಮಾನ: ಎಲಾನ್ ಮಸ್ಕ್ ಬೆಂಬಲಿಸಿ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಒಂದೇ ವೇಳೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೇ ಕನಕಪುರ ವಿಧಾನಸಭಾ ಕ್ಷೇತ್ರ ತೆರವಾಗಲಿದೆ. ತಮ್ಮಿಂದ ತೆರವಾಗುವ ಕನಕಪುರ ವಿಧಾನಸಭಾ ಕ್ಷೇತ್ರವನ್ನು ಭವಿಷ್ಯದಲ್ಲಿ ತಮ್ಮ ಸಹೋದರ ಡಿಕೆ ಸುರೇಶ್ ಅವರಿಗೆ ಬಿಟ್ಟುಕೊಡುವ ಚಿಂತನೆ ಇದೆ. ಹೀಗಾಗಿ, ಡಿಕೆ ಸಹೋದರರು ಟೆಂಪಲ್ ರನ್ ಮೂಲಕ ಚನ್ನಪಟ್ಟಣದಲ್ಲಿ ಹವಾ ಹೇಗಿದೆ ಎಂದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಹೆಚ್ಡಿ ಕುಮಾರಸ್ವಾಮಿ, ಹೆಚ್ಡಿ ದೇವೇಗೌಡ ಮತ್ತು ಕೆಂಗಲ್ ಹನುಮಂತಯ್ಯ ಹಿಂದೆ ರಾಜ್ಯದ ಮುಖ್ಯಮಂತ್ರಿಯಾದವರು. ಇದೇ ಲೆಕ್ಕಾಚಾರದಲ್ಲಿ ಡಿಕೆ ಶಿವಕುಮಾರ್ ಅವರು ಕೂಡ ಇದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Wed, 19 June 24